ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಹಾಗೂ ಸಂವಿಧಾನದ ಆಶಯವನ್ನು ಎತ್ತಿಹಿಡಿಯುವುದು ಬಿಎಸ್‌ಪಿಯಿಂದ ಮಾತ್ರ ಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳ ಅಭ್ಯರ್ಥಿಗಳು ಸಹ ಹಲವಾರು ಬಾರಿ ಆಯ್ಕೆಯಾಗಿದ್ದಾರೆ. ಬಲಾಢ್ಯರೇ ಈ ಕ್ಷೇತ್ರದಿಂದ ಚುನಾಯಿತರಾಗಿ ಸಂಸದರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿಲ್ಲ. ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.ಮಲತಾಯಿ ಧೋರಣೆ ಸರಿಯಲ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇಂದಿಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟೋ ಕಡೆ ಸಂಸದ ಡಿ.ಕೆ. ಸುರೇಶ್ ಭಾವಚಿತ್ರಗಳು ರಾರಾಜಿಸುತ್ತಿವೆ. ಇವುಗಳನ್ನು ತೆರವುಗೊಳಿಸದೇ ಚುನಾವಣಾ ಆಯೋಗ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಕೂಡಲೇ ಇವುಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ವಲಯ ಪ್ರಭಾರಿ ನಾಗೇಶ್ ಮಾತನಾಡಿ, ಸಂಸದ ಸುರೇಶ್ ಕನಕಪುರಕ್ಕೆ ಯಾವುದೇ ರೈಲ್ವೆ ಯೋಜನೆಯನ್ನು ತರಲು ಶ್ರಮಿಸಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಆದರೆ, ಸಂಸತ್ತಿನಲ್ಲಿ ಈ ಯೋಜನೆಯ ಕುರಿತು ಅವರು ಧ್ವನಿಯೆತ್ತಿಲ್ಲ. ಯಾವುದೇ ಯೋಜನೆಗಳನ್ನು ತರದೇ ಬರೀ ಜನಸಂಪರ್ಕ ಸಭೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ. ಅಣ್ಣತಮ್ಮಂದಿರು ಅಪಾರ ಪ್ರಮಾಣದ ಸಂಪತ್ತು ಗಳಿಸಿದ್ದು, ಇದನ್ನು ರಕ್ಷಿಸಲು ಒಬ್ಬರು ಶಾಸಕ ಹಾಗೂ ಮತ್ತೊಬ್ಬರು ಸಂಸದರಾಗಬೇಕಿದೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆ ಉಸ್ತುವಾರಿ ಅಂದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸಂಯೋಜಕ ವೆಂಕಟಚಲ, ಮಹಿಳಾ ಘಟಕದ ಅನು, ಪದಾಧಿಕಾರಿಗಳಾದ ದೇವರಾಜ್ ಮತ್ತು ಮಹದೇವ್, ಚಂದ್ರಕಾಂತ್, ರಮೇಶ್, ಕೂಡ್ಲೂರು ಕಾಂತರಾಜ್, ರಾಮಕೃಷ್ಣ, ಕೇಶಹೊಲೆಯರ್, ಇಮಾನ್ಯವೇಲ್ ಇತರರು ಇದ್ದರು.