ಸಹಜ ಹೆರಿಗೆಯೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲು

KannadaprabhaNewsNetwork |  
Published : Dec 01, 2025, 02:30 AM IST
. | Kannada Prabha

ಸಾರಾಂಶ

ಸಹಜ ಹೆರಿಗೆ ಎನ್ನುವ ಪರಂಪರೆ ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ.

ಶೇ. 63ರ ಗಡಿ ದಾಟಿದ ಸಿಜೇರಿಯನ್ ಪ್ರಕರಣ

30ರ ನಂತರ ಮದುವೆ ಟ್ರೆಂಡ್‌ಗೆ ವೈದ್ಯರ ಕಳವಳ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಸಹಜ ಹೆರಿಗೆ ಎನ್ನುವ ಪರಂಪರೆ ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. 30 ವರ್ಷ ದಾಟಿದ ಆನಂತರ ಮದುವೆಯಾಗುವ ಪ್ರವೃತ್ತಿ, ಮದುವೆಯಾದ ಕೂಡಲೆ ಗರ್ಭ ಧರಿಸಲು ತೋರಿಸುತ್ತಿರುವ ತಾತ್ಸಾರ ಹಾಗೂ ಆಧುನಿಕ ಜೀವನಶೈಲಿಯ ಒತ್ತಡ ಇವೆಲ್ಲವೂ ಸೇರಿ ಸಿಜೇರಿಯನ್ ಪ್ರಮಾಣ ಭಾರೀ ಏರಿಕೆಗೆ ಕಾರಣವಾಗಿದ್ದು, ವೈದ್ಯಕೀಯ ವಲಯದಲ್ಲೇ ಗಂಭೀರ ಚರ್ಚೆಗೆ ಕಾರಣವಾಗಿದೆ.

ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆ ಪ್ರಕರಣ ಶೇ. 63 ಗಡಿ ದಾಟಿರುವುದು ಕಂಡು ಬಂದಿದೆ. ಇತ್ತೀಚಿನ ನಾಲ್ಕು ವರ್ಷಗಳ ಸರಾಸರಿ ಗಮನಿಸಿದರೆ ಶಸ್ತ್ರಚಿಕಿತ್ಸೆ ಪ್ರಕರಣ ಹೆಚ್ಚುತ್ತಿದೆ. ಭ್ರೂಣ ಬೆಳವಣಿಗೆಯ ಪ್ರತಿ ಹಂತದ ಸ್ಕ್ಯಾನ್‌ ಹಾಗೂ ನಿಯಮಿತವಾಗಿ ಎಎಎನ್‌ಸಿ ಚೆಕ್‌ಅಪ್‌ ಮಾಡಿಸಿಕೊಳ್ಳುವ ಮೂಲಕ ಹೆರಿಗೆಯನ್ನು ಸುಗಮವಾಗಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

30ರ ನಂತರ ಮದುವೆ:

ಒಂದೆಡೆ ಆಧುನಿಕ ಜೀವನ ಶೈಲಿಯ ಪರಿಣಾಮ ಇನ್ನೊಂದೆಡೆ ಜೋಡಿ ಹುಡುಕಲು ಸಮಯ ಹಿಡಿಯುತ್ತಿರುವುದು, ಉದ್ಯೋಗ –ಸ್ಥಿರತೆ –ಆರ್ಥಿಕ ಭದ್ರತೆ ಕಾದಿರುವ ಯುವ ಜನತೆ ಇಂತಹ ಸಂದರ್ಭಗಳಿಂದಾಗಿ 30ರ ಆನಂತರ ಮದುವೆ ಆಗುವ ಸ್ಥಿತಿ ಇದೆ. 30ರ ನಂತರದ ಸಹಜ ಹೆರಿಗೆ ಸುರಕ್ಷಿತವಲ್ಲ ಎನ್ನುವ ಕಾರಣಗಳಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆಯತ್ತ ಒಲವು ತೋರುತ್ತಿದ್ದಾರೆ ಎನ್ನುವುದು ವೈಧ್ಯಕೀಯ ಕ್ಷೇತ್ರದ ಅಭಿಪ್ರಾಯವು ಆಗಿದೆ.

ಹಾಗೆ ಮದುವೆ ಆದ ಕೂಡಲೆ ಗರ್ಭ ಧರಿಸಲು ಆಸಕ್ತಿ ತೋರದೇ, ತಮ್ಮ ದಾಂಪತ್ಯಕ್ಕೆ ಮಕ್ಕಳಿಂದ ತೊಂದರೆ ಆಗದೇ ಇರಲಿ ಎನ್ನುವ ಕಾರಣಕ್ಕೆ ಗರ್ಭಧಾರಣೆ ಮುಂದೂಡಲು ಸಾಕಷ್ಟು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮದುವೆಯಾದ ಕೂಡಲೆ ಗರ್ಭಧಾರಣೆಗೆ ತಾತ್ಸಾರ ತೋರಲು ಪ್ರವಾಸ, ವೃತ್ತಿಜೀವನ, ಜೀವನ ವ್ಯವಸ್ಥೆ, ಸ್ವತಂತ್ರ ಜೀವನಶೈಲಿ ಪ್ರಮುಖ ಕಾರಣವಾದರೆ, ಇದು ಮುಂದಿನ ದಿನಗಳಲ್ಲಿ ಸಹಜ ಹೆರಿಗೆಯ ಪ್ರಕ್ರಿಯೆಗಳಲ್ಲಿ ಮುಳುವಾಗಿ ಪರಿಗಣಿಸಲಿದೆ.

ಬದಲಾದ ಆಧುನಿಕ ಜೀವನ ಶೈಲಿ ಹಾಗೂ ನಿತ್ಯ ಕೆಮಿಕಲ್ ಅವಲಂಬನೆಯ ಜೀವನ ಪದ್ಧತಿ ಹಾಗೂ ವಿವಿಧ ಕಾರಣಗಳಿಂದಾಗಿ ಹಾರ್ಮೋನ್‌ ಅಸಮತೋಲನ, ಅಧಿಕ ರಕ್ತದೊತ್ತಡಗಳಿಂದಾಗಿ ಶಸ್ತ್ರಚಿಕಿತ್ಸೆ ಹೆರಿಗೆ ಎನ್ನುವುದು ಅನಿವಾರ್ಯತೆಯ ಸಂದರ್ಭ ಸೃಷ್ಟಿಸಿದೆ.

ಎರಡು ದಶಕಗಳ ಹಿಂದಿನ ಕಾಲಘಟ್ಟದಲ್ಲಿ ಸೂಲಗಿತ್ತಿಯರು ಮನೆಯಲ್ಲೆ ಹೆರಿಗೆ ಮಾಡಿಸುತ್ತಿದ್ದರು. ವೈದ್ಯಕೀಯ ಕ್ಷೇತ್ರ ಬೆಳೆದಂತೆ ಆಸ್ಪತ್ರೆಯಲ್ಲಿ ಅಪಾಯರಹಿತ ಸಹಜ ಹೆರಿಗೆಗೆ ದಾಖಲಾಗುತ್ತಿರುವುದು ಕಂಡು ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಂತೂ ಕೆಲವು ಖಾಸಗಿ ಆಸ್ಪತ್ರೆಗಳ ಮಾಫಿಯಾ ಹಾಗೂ ಬದಲಾದ ಆರೋಗ್ಯ ಶೈಲಿಯಿಂದಾದ ಶಸ್ತ್ರಚಿಕಿತ್ಸೆ ಇಲ್ಲದೆ ಹೆರಿಗೆಯೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಆಸ್ಪತ್ರೆಗಳಲ್ಲಿ ಶೀಘ್ರ ಫಲಿತಾಂಶ ಮತ್ತು ಅಪಾಯ ತಪ್ಪಿಸುವುದು ಎಂಬ ಕಾರಣಗಳಿಂದ ಶಸ್ತ್ರಚಿಕಿತ್ಸೆ ಮಾರ್ಗವೇ ಮೊದಲ ಆಯ್ಕೆಯಾಗುತ್ತಿದೆ ಎಂಬ ಆರೋಪವು ಇದೆ. ಪರಿಣತರ ಪ್ರಕಾರ, ಗರ್ಭಧಾರಣೆ ಕಾಲದಲ್ಲಿ ಸರಿಯಾದ ಮಾರ್ಗದರ್ಶನ, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಹಾಗೂ ವಿಶ್ವಾಸ ತುಂಬುವ ವೈದ್ಯಕೀಯ ಸಹಾಯ ದೊರೆತರೆ ಸಹಜ ಹೆರಿಗೆ ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಾಹಿತಿ ಕೊರತೆ, ಕುಟುಂಬದ ಅತಿಯಾದ ಭಯ ಹಾಗೂ ‘ಸುರಕ್ಷತೆ’ ಎಂಬ ಹೆಸರಿನಲ್ಲಿ ಶಸ್ತ್ರಚಿಕಿತ್ಸೆಯ ಮೇಲಿನ ಅವಲಂಬನೆ ಹೆಚ್ಚಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಈ ವಿಧಾನವನ್ನು ವಾಣಿಜ್ಯೀಕರಣಗೊಂಡ ರೀತಿಯಲ್ಲಿ ನಡೆಸುವ ಶಂಕೆಯೂ ವ್ಯಕ್ತವಾಗಿದೆ.

ಸಹಜ ಹೆರಿಗೆ ಕ್ಲಿಷ್ಟಕರ ಎನ್ನುವ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಜೀವ ರಕ್ಷಕ ವಿಧಾನ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅಗತ್ಯವಿಲ್ಲದ ಸಂದರ್ಭದಲ್ಲೂ ಈ ಮಾರ್ಗ ಬಳಸುವ ಪ್ರವೃತ್ತಿ ಹೆಚ್ಚು ಕಂಡು ಬರುತ್ತಿದೆ ಎಂಬುದು ಅಂಕಿ-ಅಂಶಗಳ ಹೇಳಿಕೆ. ಮೊದಲ ಹೆರಿಗೆಯಲ್ಲೇ ಶಸ್ತ್ರಚಿಕಿತ್ಸೆಯಾದರೆ, ಮುಂದಿನ ಹೆರಿಗೆಯಲ್ಲೂ ಅದೇ ವಿಧಾನ ಅನುಸರಿಸುವುದು ಸಾಮಾನ್ಯವಾಗುತ್ತದೆ.

ನೋವಿಗೆ ಹೆದರಿ ಹೆರಿಗೆ...ಸಹಜ ಹೆರಿಗೆ ಸಂದರ್ಭದಲ್ಲಿ ಆಗುವ ಅಪಾರ ನೋವಿಗೆ ಹೆದರಿ ಶಸ್ತ್ರಚಿಕಿತ್ಸೆ ಮಾಡಿ ಬಿಡಿ ಎಂದು ಬೇಡಿಕೆ ಇಡುತ್ತಿರುವ ಪ್ರಕರಣಗಳು ಕೂಡ ಶೇ. 5 ಇದೆ ಎಂದು ವೈದ್ಯರೆ ಸ್ಪಷ್ಟಪಡಿಸುತ್ತಾರೆ.

ವರ್ಷಸಿಜೇರಿಯನ್ ಪ್ರಮಾಣ

202148%

202251%

202354%

202457%

2025(ನವಂಬರ್) 63%

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌