ಶೃಂಗೇರಿ ಶ್ರೀ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ನವರಾತ್ರಿ ಉತ್ಸವ ಆರಂಭ

KannadaprabhaNewsNetwork |  
Published : Sep 22, 2025, 01:00 AM IST
್ು | Kannada Prabha

ಸಾರಾಂಶ

ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶರನ್ನವರಾತ್ರಿ ಉತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿತು. ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ಬೆಳಿಗ್ಗೆ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಡೆಯಿತು. ಮಹಾಭಿಷೇಕದ ನಂತರ ಶೃಂಗೇರಿ ವೈಭವದ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು.

-ಜಗತ್ ಪ್ರಸೂತಿಕ ಅಲಂಕಾರದಲ್ಲಿ ಕಂಗೊಳಿಸಿದಳು ಅಧಿದೇವತೆ ಶಾರದೆ.ಹರಿದು ಬಂದಿತು ಭಕ್ತ ಸಾಗರ

ಕನ್ನಡಪ್ರಭ ವಾರ್ತೆ, ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶರನ್ನವರಾತ್ರಿ ಉತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿತು. ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ಬೆಳಿಗ್ಗೆ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಡೆಯಿತು. ಮಹಾಭಿಷೇಕದ ನಂತರ ಶೃಂಗೇರಿ ವೈಭವದ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು.

ಮಹಾಲಯ ಅಮಾವಾಸ್ಯೆಯಂದು ಮಹಾಭಿಷೇಕದೊಂದಿಗೆ ಆರಂಭವಾಗುವ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು, ಮತ್ತೆ ಭೂಮಿ ಹುಣ್ಣಿಮೆಯಂದು ಶ್ರೀ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ಅಂದು ನಡೆಯಲಿರುವ ತೆಪ್ಪೋತ್ಸವದೊಂದಿಗೆ ನವರಾತ್ರಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತದೆ.

ಶಾರದೆಗೆ ಪಂಚಾಮೃತಭಿಷೇಕದ ನಂತರ ಮೂಲ ಬಿಂಬದ ಹರಿದ್ರಾದರ್ಶನ ನೀರಾಂಜನ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ನೆರವೇರಿತು. ವಿವಿಧ ರೀತಿ ಫಲ ಪುಷ್ಪ, ಪಂಚಾಮೃತಭಿಷೇಕದಿಂದ ಶಾರದೆಯನ್ನು ಸಂಪ್ರೀತ ಗೊಳಿಸಲಾಯಿತು. 108 ಆವರ್ತಿ ಶ್ರೀ ಸೂಕ್ತ ಪಠಣದಿಂದ ಅಭಿಷೇಕ, ಜಗದ್ಗುರುಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.ಶಕ್ತಿ ಗಣಪತಿ ಸನ್ನಿದಿಯಲ್ಲಿ ಶಾರದಾಂಬೆ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ, ನಂತರ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ನವರಾತ್ರಿ ವಿಶೇಷ ಪೂಜೆ ನೆರವೇರಿತು. ಶಾರದಾಂಬೆ ಉತ್ಸವ ಮೂರ್ತಿಯಲ್ಲಿ ಸ್ವರ್ಣ ರಥದಲ್ಲಿಟ್ಟು ದೇವಾಲಯದ ಪ್ರಾಂಗಣದಲ್ಲಿ ಸುತ್ತು ಭರಿಸಲಾಯಿತು.

ಶಾರದಾಂಬೆಗೆ ಮಹಾಭಿಷೇಕ ಜನವೋ ಜನ-ಭಾನುವಾರ ಬೆಳಿಗ್ಗೆ ನಡೆದ ಶಾರದಾಂಬೆಗೆ ಮಹಾಭಿಷೇಕದ ಸಂದರ್ಭದಲ್ಲಿ ಶ್ರೀ ಶಾರದಾಂಬಾ ದೇವಾಲಯ, ಶ್ರೀ ಮಠದ ಆವರಣದಲ್ಲಿ ಭಕ್ತ ಸಾಗರದಿಂದ ತುಂಬಿತ್ತು. ಮಹಾಭಿಷೇಕದ ತೀರ್ಥ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಜನರ ನೂಕು ನುಗ್ಗಲು ಕಂಡುಬಂದಿತು. ರಾಜ್ಯ,ದೇಶದ ನಾನಾ ಕಡೆಗಳಿಂದ ಬಂದಿದ್ದ ಭಕ್ತಗಣದಿಂದ ದೇವಾಲಯದ ಆವರಣ ಗಿಜಿಗಿಡುತ್ತಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಶಾರದಾಂಬೆ ಮಹಾಭಿಷೇಕದ ತೀರ್ಥ ಪಡೆದುಕೊಂಡರು.

-- ಬಾಕ್ಸ್‌--

ಜಗತ್ ಪ್ರಸೂತಿಕ ಅಲಂಕಾರದಲ್ಲಿ ಕಂಗೊಳಿಸಿದಳು ಶಾರದೆ

ಶ್ರೀ ಶಾರದಾಂಬೆಗೆ ಮಹಾಭಿಷೇಕದ ನಂತರ ಜಗತ್ ಪ್ರಸೂತಿಕ ಅಲಂಕಾರದಿಂದ ಸಿಂಗರಿಸಲಾಗಿತ್ತು. ನವರಾತ್ರಿ ಉತ್ಸವ ಅಂಗವಾಗಿ ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.

ಸೋಮವಾರ ಶಾರದೆಗೆ ಹಂಸವಾಹಿನಿಯಲಂಕಾರ ನಡೆಯಲಿದೆ. ಬ್ರಾಹ್ಮಿಯಾಗಿ ಶಾರದೆ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಸಂಜೆಯಿಂದ ಶ್ರೀ ಮಠದ ಆವರಣದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯಲಿರುವ ಸಂಸ್ಕೃತಿಕ ಮಹೋತ್ಸವದಲ್ಲಿ ಮೊದಲ ದಿನ ಬೆಂಗಳೂರಿನ ವಿದುಷಿ ಸವಿತಾ ಶ್ರೀರಾಮ್ ತಂಡದವರಿಂದ ಹಾಡುಗಾರಿಕೆ, ಸಂಜೆಯಿಂದ ಬೀದಿ ಉತ್ಸವ ನಡೆಯಲಿದೆ.

ನವರಾತ್ರಿ ಆರಂಭದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಅಷ್ಟದ್ರವ್ಯ ಗಣಹೋಮ, ಸಪ್ತಶತಿ ಪಾರಾಯಣ, ಶತಚಂಡೀ ಮಹಾಯಾಗ, ದೇಸಿ ಭಾಗವತ ಪಠಣ, ಲಲಿತೋಪಾಖ್ಯಾನ, ಲಕ್ಷ್ಮಿನಾರಾಯಣ ಹೃದಯ, ಸೂತ ಸಂಹಿತೆ,ಮೊದಲಾದ ಗ್ರಂಥಗಳನ್ನು ಪಠಿಸಲಾಗುತ್ತದೆ. ಪ್ರತೀ ದಿನ ಶಾರದಾಂಬೆಯ ಸನ್ನಿದಿಯಲ್ಲಿ ಮಹಾ ಮಂಗಳಾರತಿ, ಲಕ್ಷಾರ್ಚನೆ, ಸಂಜೆ ಬೀದಿ ಉತ್ಸವ,ದಿಂಡೀ ದೀಪಾರಾಧನೆ,ಅಷ್ಟಾವಧಾನ ಸೇವೆ,ಜಗದ್ಗುರುಗಳ ದಸರಾ ದರ್ಬಾರ್ ನಡೆಯಲಿದೆ.

ಶೃಂಗೇರಿ ದಸರಾದ ಸಂಕೇತವಾಗಿ ಧಾರ್ಮಿಕ,ಸಾಂಸ್ಕ್ರತಿಕ ಮೆರಗು ಅಲ್ಲದೇ ಶ್ರೀ ಮಠದ ಮುಂಬಾಗದಿಂದ ಭಾರತೀ ಬೀದಿಯ ಇಕ್ಕೆಲಗಳಲ್ಲಿ ವಿವಿದೆಡೆಗಳಿಂದ ಬಂದಿರುವ ಬಂದಿರುವ ವರ್ತಕರಿಂದ ಬಗೆ ಬಗೆಯ ವಸ್ತುಗಳ ಮಾರಾಟ ಮಳಿಗೆಗಳು ಜನರನ್ನು ಆಕರ್ಷಿಸುತ್ತಿದೆ.ಗಾಂಧಿ ಮೈದಾನದಲ್ಲಿ ಪ್ರತೀ ವರ್ಷದಂತೆ ದಸರೆಯ ಸರ್ಕಸ್ ಪ್ರದರ್ಶನ,ವಿವಿಧ ವಸ್ತು,ಮಾರಾಟ ಪ್ರದರ್ಶನ ಆರಂಭಗೊಂಡಿತು.ನವರಾತ್ರಿಯ ಆರಂಭದ ದಿನವಾದ ಭಾನುವಾರ ಶೃಂಗೇರಿಯಲ್ಲಿ ಜನಸಾಗರವೇ ಕಂಡುಬಂದಿದ್ದು ಶ್ರೀ ಮಠದ ಆವರಣ ಸೇರಿದಂತೆ ಬೋಜನಾ ಶಾಲೆ,ಶ್ರೀ ಶಾರದಾಂಬೆ ದೇವಾಲಯ,ನರಸಿಂಹವನ,ಗಾಂಧಿ ಮೈದಾನ,ಶೃಂಗೇರಿ ಪಟ್ಟಣ,ವಸತಿ ಗೃಹಗಳು ಎಲ್ಲೆಡೆ ಜನಜಂಗುಳಿಯೇ ಕಂಡುಬಂದಿತು.

21 ಶ್ರೀ ಚಿತ್ರ 1-ಶೃಂಗೇರಿ ಶಾರದೆಗೆ ಭಾನುವಾರ ಜಗತ್ ಪ್ರಸೂತಿಕ ಅಲಂಕಾರ ಮಾಡಲಾಗಿತ್ತು.

21 ಶ್ರೀ ಚಿತ್ರ 2-ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಭಾನುವಾರ ಕಂಡುಬಂದ ಜನ ಸಾಗರ.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ