ಹುಬ್ಬಳ್ಳಿ:
ನೇಹಾ ಕೊಲೆ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದು, ಈ ಕುರಿತು ಹೈಕೋರ್ಟ್‌ಗೆ ಪತ್ರ ಸಲ್ಲಿಸುತ್ತಿರುವುದಾಗಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಇಲ್ಲಿನ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದು, ತನಿಖೆ ಆರಂಭವಾಗಿದೆ. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ನ್ಯಾಯ ಸಿಗಲಿದೆ. ರಾಜ್ಯ ಪೊಲೀಸರೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ, ಎಲ್ಲೆಡೆ ಪ್ರತಿಭಟನೆ, ಹೋರಾಟ ತೀವ್ರವಾಗುತ್ತಿವೆ. ರಾಜ್ಯದ ಜನತೆಯ ಭಾವನೆಗೆ ಸರ್ಕಾರ ಸ್ಪಂದಿಸುವುದರೊಂದಿಗೆ ಸಿಐಡಿಗೆ ಒಪ್ಪಿಸಿದೆ ಎಂದರು.ದೂರವಾಣಿ ಕರೆ:
ಕೆಲವು ಅನಿವಾರ್ಯ ಕಾರಣಗಳಿಂದಾಗಿ ನಿರಂಜನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಲು ಆಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರಂಜನ ಜತೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅವರೇ ವಿವರಿಸಿದ್ದಾರೆ ಎಂದರು.ಮುಗಿದ ಅಧ್ಯಾಯ:
ಮುಖ್ಯಮಂತ್ರಿ ಮತ್ತು ಗೃಹಸಚಿವರು ನೀಡಿದ್ದ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಪಾಟೀಲ, ಅದು ಈಗ ಮುಗಿದ ಅಧ್ಯಾಯ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.ಮೋದಿ ವಜಾಗೊಳಿಸಿ:
ದೇಶದ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ದ್ವೇಷ ಹರಡುವ ಭಾಷಣ ಮಾಡುತ್ತಿದ್ದು, ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಿ ಚುನಾವಣೆ ಪ್ರಕ್ರಿಯೆಯಿಂದ ಮೋದಿ ಅವರನ್ನು ವಜಾಗೊಳಿಸಬೇಕು. ಪ್ರಜಾಪ್ರಭುತ್ವದ ಕುರಿತು ಮೋದಿ ಅವರು ಬಳಸುತ್ತಿರುವ ಶಬ್ದ, ಭಾಷೆ ನೋಡಿದರೆ ಓರ್ವ ಪಾಲಿಕೆ ಸದಸ್ಯ ಕೂಡ ಅಷ್ಟು ಕೆಳಮಟ್ಟದ ಮಾತು ಹೇಳುವುದಿಲ್ಲ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಮಾತುಗಳನ್ನು ಯಾರೂ ಈವರೆಗೆ ಆಡಿಲ್ಲ. ಆದರೆ, ಪ್ರಧಾನಿಗಳು ಧರ್ಮಗಳ, ಧರ್ಮಿಯರ ಹೆಸರಿನಲ್ಲಿ ದ್ವೇಷದ ಭಾಷಣ ಪ್ರಯೋಗ ಮಾಡಿದ್ದಾರೆ ಎಂದು ಕಿಡಿಕಾರಿದರು.ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಮೋದಿ ದ್ವೇಷದ ಮಾತುಗಳನ್ನಾಡಿದ್ದಾರೆ. ಈ ಎಲ್ಲವನ್ನು ನೋಡಿದಾಗ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆ ಸಂಪೂರ್ಣವಾಗಿ ಉಲ್ಲಂಘನೆ ಆಗಿದ್ದು, ಈ ಬಗ್ಗೆ ಚುನಾವಣೆ ಆಯೋಗ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಮೋದಿ ಅವರನ್ನು ಚುನಾವಣೆ ಪ್ರಕ್ರಿಯೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗಿರಿ, ನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರು, ಮಹೇಂದ್ರ ಸಿಂಘಿ, ಮೋಹನ ಅಸುಂಡಿ ಸೇರಿದಂತೆ ಹಲವರಿದ್ದರು.