ನವಜಾತ ಶಿಶುಗಳ ವಿಶೇಷ ಕಾಳಜಿಗೆ ಹೊಸದಾಗಿ ‘ಎನ್‌ಐಸಿಯು’ ಸ್ಥಾಪನೆ

KannadaprabhaNewsNetwork |  
Published : Apr 23, 2026, 01:45 AM IST
ಪೊಟೋ: 22ಎಸ್‌ಎಂಜಿಕೆಪಿ03ಶಿವಮೊಗ್ಗದ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಇರುವ ನವಜಾತ ಶಿಶುಗಳ ವಿಶೇಷ ಕಾಳಜಿ ತೆಗೆದುಕೊಳ್ಳುವುದಕ್ಕಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್‌ಐಸಿಯು ಘಟಕ ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಬಿ.ವೈ.ರಾಘವೇಂದ್ರ ಹೇಳಿಕೆ । ನಿರ್ಮಲಾ ಸೀತಾರಾಮನ್‌ರವರ ನಿಧಿಯಲ್ಲಿ 5 ಕೋಟಿ ರು. ಮಂಜೂರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಇರುವ ನವಜಾತ ಶಿಶುಗಳ ವಿಶೇಷ ಕಾಳಜಿ ತೆಗೆದುಕೊಳ್ಳುವುದಕ್ಕಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್‌ಐಸಿಯು ಘಟಕ ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಮ್ಸ್ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್‌ಐಸಿಯು ಘಟಕ ಸ್ಥಾಪಿಸುವುದಕ್ಕಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ರವರ ನಿಧಿಯಲ್ಲಿ 5 ಕೋಟಿ ರು. ಮಂಜೂರಾಗಿದೆ ಎಂದು ತಿಳಿಸಿದರು.

ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾದಂತೆ ಎನ್‌ಐಸಿಯು ಮೇಲಿನ ಒತ್ತಡವೂ ನಿರಂತರವಾಗಿ ಹೆಚ್ಚುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಈ ಬೇಡಿಕೆಗೆ ಸ್ಪಂದಿಸಿ 5 ಕೋಟಿ ರು. ಮಂಜೂರು ಮಾಡಿರುವುದು ಸಂತಸ ತಂದಿದ್ದು, ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎನ್‌ಐಸಿಯು ಸ್ಥಾಪನೆಯಿಂದ ಸಮಸ್ಯೆಯುಳ್ಳ ನವಜಾತ ಶಿಶುಗಳ ಬದುಕುಳಿಯುವ ಪ್ರಮಾಣನ್ನು ಬಹಳ ಮಟ್ಟಿಗೆ ಹೆಚ್ಚಿಸುತ್ತದೆ. ಇನ್‌ಕ್ಯುಬೇಟರ್, ವೆಂಟಿಲೇಟರ್‌ಗಳು, ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಮುಂತಾದ ಸುಧಾರಿತ ಉಪಕರಣಗಳನ್ನು ಬಳಸಿ ಮಗುವಿನ ದೇಹದ ಉಷ್ಣತೆ, ಉಸಿರಾಟ ಮತ್ತು ಆರೋಗ್ಯವನ್ನು ನಿರ್ವಹಿಸಬಹುದು. 24X7 ಮಾನಿಟರಿಂಗ್‌ನೊಂದಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.

ಆರ್‌ಡಿಪಿಆರ್ ವತಿಯಿಂದ ಕಾಮಗಾರಿ ಕೈಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. 4.40 ಕೋಟಿ ರು. ಉಪಕರಣಗಳಿಗೆ ಹಾಗೂ ಉಳಿದ 60 ಲಕ್ಷ ರು. ಮೊತ್ತವನ್ನು ಮೂಲಭೂತ ಸೌಲಭ್ಯಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಎನ್‌ಐಸಿಯು ಸ್ಥಾಪನೆಯಿಂದ ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳಿಗೆ ಅತ್ಯಂತ ಅನುಕೂಲವಾಗಲಿದೆ. ನವಜಾತ ಮಕ್ಕಳ ಹಕ್ಕುಗಳ ಕಾಪಾಡುವ ಮಹತ್ವದ ಹೆಜ್ಜೆ ಕೂಡ ಇದಾಗಿದೆ. ಮೆಗ್ಗಾನ್ ಆಸ್ಪತ್ರೆಯು ಸುತ್ತಮುತ್ತಲಿನ 4-5 ಜಿಲ್ಲೆಗಳಿಗೆ ಉತ್ತಮ ಸೇವೆ ನೀಡುತ್ತಿದ್ದು ಸ್ವಚ್ಚತೆಯಲ್ಲಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ ಎಂದರು.

*ಸಿಎಸ್‌ಆರ್ ನಿಧಿಯಿಂದ ಸೇವೆ:

ಜಿಲ್ಲೆಯ ದೃಷ್ಟಿಹೀನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಭಾರತೀಯ ಸೌರಶಕ್ತಿ ನಿಗಮ ನಿಯಮಿತದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ನಗರದ ಶಾರದಾದೇವಿ ಅಂಧರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ 23 ಲಕ್ಷ ರು. ಮೊತ್ತದ ಅತ್ಯಾಧುನಿಕ ಬ್ರೈಲ್ ಕಲಿಕಾ ಸಾಧನಗಳನ್ನು ಒದಗಿಸಲಾಗುತ್ತಿದೆ ಎಂದರು.

ಒಎನ್ ಜಿಸಿ ಯವರು ಎಸ್‌ಸಿ/ಎಸ್‌ಟಿ ಸಮುದಾಯ ವಾಸಿಸುವ 1000 ಗ್ರಾಮಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ಒಪ್ಪಿದ್ದಾರೆ. ಬೈಂದೂರು ಕ್ಷೇತ್ರಕ್ಕೆ 600 ಹೊಲಿಗೆ ಮಷೀನ್ ಗಳನ್ನು ನೀಡಲು ಒಪ್ಪಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕೆಲಸಗಳು ಆಗುತ್ತಿದೆ ಎಂದರು.

ಕೇಂದ್ರ ಸರ್ಕಾರದಿಂದ ಮಹಿಳೆಯರ ಗರ್ಭಗೊರಳಿನ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ತುಂಬಿದ ಹಾಗೂ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 60 ಕೋಟಿ ರು. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ವಾರ್ಡ್ ನಿರ್ಮಾಣ ಮಾಡಲಾಗುತ್ತಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ , ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಗೀತಾ, ಡಿಎಚ್‌ಒ ಡಾ.ನಟರಾಜ್, ಸಿಮ್ಸ್ ಸಿಎಓ ಉಮಾ ಸದಾಶಿವ ಇತರರು ಹಾಜರಿದ್ದರು.

---

ಪೊಟೋ: 22ಎಸ್‌ಎಂಜಿಕೆಪಿ03

ಶಿವಮೊಗ್ಗದ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಅವಶ್ಯಕತೆ ಇದೆ
ಗುಂಡ್ಲುಪೇಟೆಯ ಕಣಿಯರ ಬೀದೀಲಿ ರಸ್ತೆ ಮೇಲೆ ಕೊಳಚೆ ನೀರು ಹರಿವು!