ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿರುವ ಹೈಕೋರ್ಟ್, ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ, ಸರ್ಕಾರ ಸಹ ಇದನ್ನೇ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿರುವ ಹೈಕೋರ್ಟ್, ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ, ಸರ್ಕಾರ ಸಹ ಇದನ್ನೇ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಎಂ.ಪಿ. ರೇಣುಕಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಈ ಮಧ್ಯಂತರ ಆದೇಶ ಮಾಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶಿಸಿರುವ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಹಾಗೂ ದೂರುದಾರ ಪೊಲೀಸ್ ಪೇದೆ ಬಿ.ಆರ್. ರವಿ (ಪೊಲೀಸ್ ಪೇದೆ) ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.ವಿಚಾರಣೆ ವೇಳೆ ರೇಣುಕಾಚಾರ್ಯ ಪರ ವಕೀಲರು, ಡಿಜೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯನ್ನು ಸುದ್ದಿಗೋಷ್ಠಿಯಲ್ಲಿ ಅರ್ಜಿದಾರರು ಪ್ರಶ್ನಿಸಿದ್ದರು. ಅವರ ಹೇಳಿಕೆ ತಿರುಚಲಾಗಿದ್ದು, ತಪ್ಪಾಗಿ ಮಾಡಲಾಗಿರುವ ವರದಿ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.ಸರ್ಕಾರದ ಪರ ವಕೀಲರು, ಸರ್ಕಾರ ಅಥವಾ ಡಿಸಿ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿತ್ತು. ಅದನ್ನು ಯಾರೂ ತಡೆಯುತ್ತಿರಲಿಲ್ಲ. ಅದು ಬಿಟ್ಟು ಜನರನ್ನು ಸೇರಿಸಿ, ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ನೆರೆದಿದ್ದ ಜನರನ್ನು ಉದ್ದೇಶಿಸಿ ‘ನೀವು ಡಿಜೆ ಹಾಕಿ, ತಾಕತ್ತಿದ್ದರೆ ಪೊಲೀಸರು ಬಂದು ತಡೆಯಲಿ ನೋಡೋಣ’ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಭಾಷೆಯನ್ನು ಜನಪ್ರತಿನಿಧಿಯೊಬ್ಬರು ಬಳಸುತ್ತಾರೆಯೇ ಎಂದು ಆಕ್ಷೇಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರವೂ ಸಹ ಇದನ್ನೇ ಮಾಡುತ್ತಿರುವುದನ್ನು ಗಮನಿಸಲಾಗಿದೆ, ಈ ರೀತಿ ಆಗಬಾರದು ಎಂದು ಮೌಖಿಕವಾಗಿ ಹೇಳಿತು.ಸರ್ಕಾರದ ಪರ ವಕೀಲರು ಉತ್ತರಿಸಿ, ಸಣ್ಣ ವಿಚಾರವನ್ನು ಎಲ್ಲರೂ ಸೇರಿ ದೊಡ್ಡದು ಮಾಡಲು ಮುಂದಾಗುತ್ತಾರೆ. ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಮದ್ದೂರಿನಲ್ಲಿ ಇಂತಹದ್ದೇ ವಿಚಾರದಲ್ಲಿ ನಡೆದ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸರ್ಕಾರದ ಆದೇಶ ಪ್ರಶ್ನಿಸಿದರೆ ಯಾವುದೇ ತಕರಾರಿಲ್ಲ. ಆದರೆ, ರಸ್ತೆಯಲ್ಲಿ ನಿಂತು ಜನರನ್ನು ಸೇರಿಸಿ, ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.