ಹಳ್ಳಿಗಳ ಸುಧಾರಣೆಗೆ ಯಾರೂ ಮನಸ್ಸು ಮಾಡುತ್ತಿಲ್ಲ: ಪ್ರೊ.ಜೆಪಿ

KannadaprabhaNewsNetwork |  
Published : Nov 26, 2025, 01:45 AM IST
25ಕೆಎಂಎನ್ ಡಿ30 | Kannada Prabha

ಸಾರಾಂಶ

ಗಾಂಧೀಜಿ ಭಜನೆ ಮಾಡುವುದನ್ನು ಬಿಟ್ಟು ಗ್ರಾಮೀಣರಿಗೆ, ಮಕ್ಕಳ ಮನಸ್ಸಿನ ಅಂಗಳಕ್ಕೆ ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ ಅವರ ವಿಚಾರಧಾರೆ ತಲುಪಿಸಬೇಕಿದೆ. ಇದರ ಜತೆಗೆ ಮಕ್ಕಳಿಗೆ ಲೋಕಜ್ಞಾನದ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗಾಂಧಿ ವಿಚಾರಧಾರೆಗಳನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗದ ಹೊರತು ಗ್ರಾಮ ಸ್ವರಾಜ್ಯದ ಕನಸ್ಸು ನನಸಾಗದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಪ್ರಚಾರದ ವಿಜಯ ಕಾಲೇಜಿನಲ್ಲಿ ನಡೆದ ‘ಮರಳಿ ಮನಕೆ -ಗಾಂಧಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತಿ’ ಎರಡು ದಿನದ ವಿಚಾರ ಸಂಕಿರಣದ’ ಗಾಂಧೀಜಿ ಪರಿಕಲ್ಪನೆಯ ಗ್ರಾಮ ಸ್ವರಾಜ್ಯ’ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧೀಜಿ ಭಜನೆ ಮಾಡುವುದನ್ನು ಬಿಟ್ಟು ಗ್ರಾಮೀಣರಿಗೆ, ಮಕ್ಕಳ ಮನಸ್ಸಿನ ಅಂಗಳಕ್ಕೆ ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ ಅವರ ವಿಚಾರಧಾರೆ ತಲುಪಿಸಬೇಕಿದೆ. ಇದರ ಜತೆಗೆ ಮಕ್ಕಳಿಗೆ ಲೋಕಜ್ಞಾನದ ಅರಿವು ಮೂಡಿಸಬೇಕು ಎಂದರು.

ಹಳ್ಳಿಗಳ ಸುಧಾರಣೆಗೆ ಯಾರು ಮನಸ್ಸು ಮಾಡುತ್ತಿಲ್ಲ. ಭ್ರಷ್ಟಾಚಾರ ಶಾಪ, ಕಳಂಕ ಎನ್ನುವುದನ್ನು ನಮ್ಮ ಯಾವ ನಾಯಕರು ತೋರಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾಯಕರಿಗೆ ಸಾರ್ವಜನಿಕ ಲಜ್ಜೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಮಾದರಿಯಾಗದೆ ಯುವ ಸಮುದಾಯಕ್ಕೆ ಹೇಗೆ ಹೇಳಲು ಸಾಧ್ಯ. ಮನಪರಿವರ್ತನೆ ಮೂಲಕವಷ್ಟೆ ಹಳ್ಳಿಗಳ ಸುಧಾರಣೆ. ನಮ್ಮನ್ನು ನಾವು ಪ್ರೀತಿಸಬೇಕು. ನಮ್ಮ ಹೊಣೆಗಾರಿಕೆ, ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಯುವ ಸಮುದಾಯ ಕೇಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯ ಹಣಕಾಸು ಆಯೋಗದ ನಿವೃತ್ತ ನಿರ್ದೇಶಕ ಎಂ.ಕೆ.ಕೆಂಪೇಗೌಡ ಮಾತನಾಡಿ, ಗಾಂಧಿ ಅವರ ಗ್ರಾಮಸ್ವರಾಜ್ಯದ ಕಲ್ಪನೆ ಸಹಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಪಂಚಾಯಿತ್ ರಾಜ್ಯ ವ್ಯವಸ್ಥೆಯಡಿ ಕೆಲಸ ಮಾಡುತ್ತಿದೆ. ಅಧಿಕಾರ ವಿಕೇಂದ್ರೀಕರದಡಿ ತಳಮಟ್ಟದಿಂದ ಅಧಿಕಾರಕೊಟ್ಟು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯುವ ಸಮುದಾಯದ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ನಾಲ್ಕನೇ ಗೋಷ್ಠಿ ಅಧ್ಯಕ್ಷತೆ ವಹಿಸಿ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಗಾಂಧೀಜಿ ಅವರ ತತ್ವ, ನಾಲ್ವಡಿ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಸಮಾಜ ಬದಲಾವಣೆಯಾತ್ತ ಸಾಗಲಿದೆ. ಆದರೆ, ಪ್ರಸ್ತುತ ನಮ್ಮನಾಳುವವರು ಅಧಿಕಾರ ಹಾಗೂ ಬೋಗ ಜೀವನದ ಹಿಂದೆ ಬಿದ್ದಿರುವುದರಿಂದ ಸಮಾಜ ಅದೋಗತಿಗೆ ತಲುಪುತ್ತಿದೆ ಎಂದು ವಿಷಾದಿಸಿದರು.

ಗಾಂಧೀಜಿ ಅಧಿಕಾರದಿಂದ ದೂರ ಉಳಿದವರು. ನಾಲ್ವಡಿಯವರು ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಧಿಕಾರ ಅಹಂಕಾರ ಮತ್ತು ಸ್ವಾರ್ಥಕ್ಕಾಗಿ ಬಳಕೆಯಾಗಬಾರದು. ಜನ, ಸಮಾಜದ ಹಿತಕಾಯಬೇಕು ಇದಕ್ಕೆ ನಾಲ್ವಡಿಯವರು ಉದಾಹರಣೆಯಾಗಿದ್ದಾರೆ ಎಂದರು.

ಇಂದು ಯುವ ಸಮುದಾಯ ಬೋಗದ ಸಂಸ್ಕೃತಿಯ ಜತೆ ಹುಚ್ಚು ಕುದುರೆಯಂತೆ ಹೋಗುತ್ತಿದೆ. ಶಿಕ್ಷಣದಲ್ಲಿ ಬದಲಾವಣೆಯಾಗಬೇಕಿದೆ . ಶ್ರೇಷ್ಠ ವ್ಯಕ್ತಿಗಳು ಮುಂದೆ ನಿಂತು ಯುವ ಜನತೆಗೆ ದಾರಿ ತೋರುವ ಕೆಲಸ ಮಾಡಬೇಕು. ಆದರೆ, ನಮಗೆ ಮಾದರಿಯಾಗಿ ನಿಲ್ಲಬೇಕಿರುವ ವ್ಯಕ್ತಿಗಳೇ ಕೆಟ್ಟದ್ದು, ಅಪರಾಧ ಮಾಡಿ ಜೈಲಿಗೆ ಹೋಗುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.

ಸರ್ಕಾರಗಳು ಪುಸ್ತಕದ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಮಕ್ಕಳು ಪುಸ್ತಕ ಓದುವ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಬೇಕು. ಒಳ್ಳೆಯ ತನಕ್ಕೆ ಮಹತ್ವ ಇಲ್ಲದ ಸಂದರ್ಭದಲ್ಲಿ ಕೆಟ್ಟದ್ದು ರಾರಾಜಿಸುತ್ತದೆ. ಮಾಧ್ಯಮಗಳು ಕೆಟ್ಟದ್ದನ್ನು ವೈಭವಿಕರಿಸುತ್ತಿವೆ. ಏಕೆಂದರೆ ಕೆಟ್ಟದ್ದು ಸಮಾಜವನ್ನು ಆಕರ್ಷಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಶೈಕ್ಷಣಿಕ ಸಲಹೆಗಾರ ಡಾ.ಎಸ್.ತುಕಾರಾಮ್, ಮಂಡ್ಯ ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ