ಅನ್ನಭಾಗ್ಯ ಯೋಜನೆಯ ಅಡಿ ಹಂಚಿಕೆ ಮಾಡಲಾಗುತ್ತಿರುವ ಪಡಿತರ ಅಕ್ಕಿ ‘ನೋ ಸ್ಟಾಕ್‌’ !

KannadaprabhaNewsNetwork |  
Published : Mar 18, 2025, 01:47 AM ISTUpdated : Mar 18, 2025, 07:18 AM IST
ಬೆಂಗಳೂರಿನ ನ್ಯಾಯಬೆಲೆ ಅಂಗಡಿಯೊಂದರ ಮುಂದೆ ಸೋಮವಾರ ‘ನೋ ಸ್ಟಾಕ್‌’ ಫಲಕ | Kannada Prabha

ಸಾರಾಂಶ

ಮಂಡ್ಯ, ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿರುವ ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರಗಳ ಮುಂದೆ ಸ್ಟಾಕ್ ಇಲ್ಲ ಎಂಬ ಫಲಕ ಕಂಡು ಬಂದಿವೆ.

 ಬೆಂಗಳೂರು : ಮಂಡ್ಯ, ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿರುವ ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರಗಳ ಮುಂದೆ ಸ್ಟಾಕ್ ಇಲ್ಲ ಎಂಬ ಫಲಕ ಕಂಡು ಬಂದಿವೆ.

ಆಹಾರ ಇಲಾಖೆಯಿಂದ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ ಫಲಾನುಭವಿಗಳಿಗೆ ಮಾರ್ಚ್‌ನಲ್ಲಿ ಹಂಚಿಕೆಯಾಗಬೇಕಿದ್ದ 4.34 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಈಗಾಗಲೇ ರಾಜ್ಯದ ಎಲ್ಲಾ ಪಡಿತರ ವಿತರಣಾ ಕೇಂದ್ರಗಳಿಗೆ ರವಾನೆ ಮಾಡಲಾಗಿತ್ತು. ಮಾರ್ಚ್‌ 11ರಿಂದಲೇ ಆಹಾರ ಧಾನ್ಯಗಳ ವಿತರಣೆ ಆರಂಭವೂ ಆಗಿತ್ತು. ಆದರೆ, ಒಂದೆರಡು ದಿನಗಳಲ್ಲೇ ಪಡಿತರ ವಿತರಣಾ ಕೇಂದ್ರಗಳ ಮುಂದೆ ಅಕ್ಕಿ ಇಲ್ಲ ಎನ್ನುವ ಫಲಕ ಕಂಡು ಬಂದಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಬೆಂಗಳೂರು, ದಾವಣಗೆರೆ, ಯಾದಗಿರಿ ಸೇರಿದಂತೆ ಹಲವೆಡೆ ಶೇ.30ಕ್ಕೂ ಹೆಚ್ಚು ಫಲಾನುಭವಿಗಳು ಒಂದು ಕೆಜಿ ಅಕ್ಕಿಯನ್ನೂ ಪಡೆದಿಲ್ಲ ಎಂಬ ಆರೋಪಿಸಲಾಗುತ್ತಿದೆ.

ಪಡಿತರ ವಿತರಣೆ ಕೇಂದ್ರದ ಮಾಲೀಕರೊಬ್ಬರು, ಫೆಬ್ರವರಿ ಮಾಹೆಯ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಈ ತಿಂಗಳೇ(ಮಾರ್ಚ್‌) ಕೊಡಬೇಕೆಂಬ ನಿರ್ದೇಶನದ ಮೇರೆಗೆ ಮೊದಲು ಬಂದಂತಹ ಫಲಾನುಭವಿಗಳಿಗೆ ಮಾರ್ಚ್‌ ತಿಂಗಳ 10 ಕೆಜಿಯೊಂದಿಗೆ ಫೆಬ್ರವರಿ 5 ಕೆಜಿ ಅಕ್ಕಿ ಸೇರಿಸಿ ಪ್ರತಿ ಫಲಾನುಭವಿಗೆ ಒಟ್ಟು 15 ಕೆಜಿಯಂತೆ ವಿತರಿಸಲಾಗಿದೆ. ಇದರಿಂದ ಪಡಿತರ ವಿತರಣಾ ಕೇಂದ್ರಗಳಲ್ಲಿ ಅವಧಿಗೂ ಮುನ್ನವೇ ಅಕ್ಕಿ ದಾಸ್ತಾನು ಖಾಲಿಯಾಗಿದೆ. ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಫಲಾನುಭವಿಗಳು ಕಾಯಬಾರದು ಎನ್ನುವ ಉದ್ದೇಶದಿಂದ ಅಕ್ಕಿ ಇಲ್ಲ ಎನ್ನುವ ಫಲಕ ಹಾಕಲಾಗಿದೆ. ಅಕ್ಕಿ ಇದ್ದರೆ ಕೊಡಲು ನಮಗೇನು ಸಮಸ್ಯೆಯಿಲ್ಲ ಎಂದಿದ್ದಾರೆ.

ಇನ್ನೆರಡು ದಿನಗಳಲ್ಲಿ ಇತ್ಯರ್ಥ:

ಈಗಾಗಲೇ ರಾಜ್ಯ ಸರ್ಕಾರ ಬೇಡಿಕೆ ಇರುವಷ್ಟು ಅಕ್ಕಿಯನ್ನು ಸರಬರಾಜು ಮಾಡುವಂತೆ ಭಾರತೀಯ ಆಹಾರ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಣವನ್ನು ಕೂಡ ಪಾವತಿ ಮಾಡಿದೆ. ಎರಡ್ಮೂರು ದಿನಗಳಲ್ಲಿ ಅಕ್ಕಿ ಬರಲಿದೆ. ಆ ನಂತರ ಪಡಿತರ ವಿತರಣಾ ಕೇಂದ್ರಗಳಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು ಅಕ್ಕಿ ಕೊರತೆ ಇತ್ಯರ್ಥವಾಗಲಿದೆ. ಪ್ರತಿಯೊಬ್ಬ ಫಲಾನುಭವಿಗೂ ಅಕ್ಕಿ ಸಿಗುವವರೆಗೂ ಅಕ್ಕಿ ಹಂಚಿಕೆ ಮುಂದುವರೆಯಲಿದೆ. ಈ ಬಗ್ಗೆ ಫಲಾನುಭವಿಗಳಲ್ಲಿ ಆತಂಕ ಬೇಡ ಎಂದು ಆಹಾರ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಏನಿದು ಸಮಸ್ಯೆ?

- ಈ ತಿಂಗಳು ಪ್ರತಿ ಫಲಾನುಭವಿಗೆ ಒಟ್ಟು 15 ಕೆಜಿ ಅಕ್ಕಿ ವಿತರಣೆಗೆ ನಿರ್ಧಾರ ಆಗಿತ್ತು

- ಮಾರ್ಚ್‌ ತಿಂಗಳ 10 ಕೆಜಿ ಅಕ್ಕಿ ಜತೆ ಫೆಬ್ರವರಿಯ 5 ಕೆಜಿ ಅಕ್ಕಿ ಸೇರಿಸಿ ನೀಡಲು ಉದ್ದೇಶ

- ಹೆಚ್ಚುವರಿ ಅಕ್ಕಿ ವಿತರಣೆಯ ಕಾರಣ ಅವಧಿಗೂ ಮುನ್ನವೇ ಅಕ್ಕಿ ದಾಸ್ತಾನು ಖಾಲಿ

- ಹೀಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ‘ಅಕ್ಕಿ ಇಲ್ಲ’ ಎಂಬ ಫಲಕ ಅಳವಡಿಕೆ

- ಇದನ್ನು ನೋಡಿದ ಪಡಿತರ ಚೀಟಿದಾರರಿಂದ ಆಕ್ರೋಶ, ಅಕ್ಕಿ ಸಿಗದೇ ನಿರಾಶೆಯಿಂದ ವಾಪಸ್

- ಈ ಮುಂಚೆ ಹೆಚ್ಚುವರಿ ಅಕ್ಕಿಗೆ ನೀಡುತ್ತಿದ್ದ ಹಣವೂ ಇಲ್ಲ, ಈಗ ಅಕ್ಕಿಯೂ ಇಲ್ಲ ಎಂದು ಸಿಡಿಮಿಡಿ

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ