ಶೇ.1 ರಷ್ಟು ಒಳ ಮೀಸಲಾತಿ ನೀಡುವಂತೆ ಅಲೆಮಾರಿ ಸಮುದಾಯ ಪ್ರತಿಭಟನೆ

KannadaprabhaNewsNetwork |  
Published : Aug 30, 2025, 01:00 AM IST
29ಕೆಎಂಎನ್ ಡಿ24 | Kannada Prabha

ಸಾರಾಂಶ

ಒಂದೆಡೆ ನೆಲೆ ನಿಂತು ಕೂಲಿ ಮಾಡಿ ಜೊತೆಗೆ ಕುಲಕಸುಬುಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದೇವೆ. ಆದರೆ ನಮಗೆ ವಾಸಿಸಲು ಸ್ವಂತ ಮನೆ ಇಲ್ಲ. ಇದ್ದರೂ ಚಿಕ್ಕ ಚಿಕ್ಕ ಮನೆಗಳಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲಾತಿ ನೀಡದೆ ಸರ್ಕಾರ ಇತರೆ ಸಮುದಾಯಗಳೊಂದಿಗೆ ನಮ್ಮನ್ನು ಸೇರ್ಪಡೆ ಮಾಡಿ ದ್ರೋಹ ಮಾಡಿದೆ ಎಂದು ಆರೋಪಿಸಿ ತಾಲೂಕು ಅಲೆಮಾರಿ ಸಮುದಾಯ ಸಂಘಗಳ ಒಕ್ಕೂಟ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಯಲ್ಲಿ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಘೋಷಣೆ ಕೂಗುತ್ತಾ, ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುವ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡುತ್ತಾ, ತಾಲೂಕು ಕಚೇರಿಯವರೆಗೆ ಬೃಹತ್ ಮೆರವಣಿಗೆ ಮೂಲಕ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಲೋಕೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರವು ನಮಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ನೀಡಬೇಕು. ಅಸ್ಪೃಶ್ಯ ಸಮುದಾಯಗಳಾದ ಭೋವಿ, ಲಂಬಾಣಿ, ಕುಳುವ ಜಾತಿಗಳೊಂದಿಗೆ ನಮ್ಮನ್ನು ಸೇರಿಸಿ ಮರಣ ಶಾಸನ ಬರೆದಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಒಂದೆಡೆ ನೆಲೆ ನಿಂತು ಕೂಲಿ ಮಾಡಿ ಜೊತೆಗೆ ಕುಲಕಸುಬುಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದೇವೆ. ಆದರೆ ನಮಗೆ ವಾಸಿಸಲು ಸ್ವಂತ ಮನೆ ಇಲ್ಲ. ಇದ್ದರೂ ಚಿಕ್ಕ ಚಿಕ್ಕ ಮನೆಗಳಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದೇವೆ. ಬೇಸಾಯಕ್ಕೆ ಭೂಮಿ ಮಂಜೂರು ಮಾಡಿಕೊಡಬೇಕು. ಕುಟುಂಬಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಭೋವಿ, ಲಂಬಾಣಿ, ಕುಳುವ ಸಮುದಾಯಗಳೊಂದಿಗೆ ಸೇರಿಸಬಾರದು. ಕೂಡಲೇ ನಮ್ಮ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ನ್ಯಾಯಮೂರ್ತಿಗಳ ಶಿಫಾರಸ್ಸಿನಂತೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಲೆಮಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಮಾಣಿಕ್ಯನಹಳ್ಳಿ ಶಿವಣ್ಣ, ಹಂದಿಜೋಗಿ ಸಂಘದ ಅಧ್ಯಕ್ಷ ಸ್ವಾಮಿ, ಅಲೆಮಾರಿ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಗೌರವ ಸಲಹೆಗಾರ ಚೌಡೇನಹಳ್ಳಿ ದೇವರಾಜು, ಗ್ರಾಪಂ ಸದಸ್ಯ ಗಿರೀಶ್, ಅಲೆಮಾರಿ ಶಿಳ್ಳೇಕ್ಯಾತ ಸಮುದಾಯ ಸಂಘಟನೆಗಳ ಜಿಲ್ಲಾಧ್ಯಕ್ಷ ಎಂ.ಆರ್.ಕರಿಯಪ್ಪ, ಒಕ್ಕೂಟದ ಮುಖಂಡರಾದ ಕೃಷ್ಣಪುರ ಶಿವಣ್ಣ, ಬಳ್ಳೇಕೆರೆ ಶಿವಣ್ಣ, ರಾಮನಹಳ್ಳಿ ಮಂಜುನಾಥ್, ಕೆ.ಆರ್.ಪೇಟೆ ಚಂದ್ರಶೇಖರ್, ಕೃಷ್ಣಪುರ ದೇವರಾಜು, ಶಾಂತಪ್ಪ, ಮಾಣಿಕ್ಯನಹಳ್ಳಿ ವೆಂಕಟೇಶ್, ಮರಿಯಪ್ಪ, ರಂಗಪ್ಪ. ವಡ್ಡರಹಳ್ಳಿ ಬಾಲಯ್ಯ, ಸೋಮಶೇಖರ್, ಲಕ್ಷ್ಮೀಪುರ ಎಲ್.ಆರ್.ಸ್ವಾಮಿ, ತೇಗನಹಳ್ಳಿ ಸ್ವಾಮಿ, ಮುರುಕನಹಳ್ಳಿ ಕೃಷ್ಣಮೂರ್ತಿ, ಉದ್ದಿನಬೋರೇಕಾವಲು ಕೃಷ್ಣಪ್ಪ, ಕೃಷ್ಣಪುರ ರಾಮು, ರಂಗ, ಹನುಮಂತ, ಮಾರಪ್ಪ, ಆಂಜಿನಪ್ಪ, ತಗ್ಗಳ್ಳಿ ಯಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ