ಕನ್ನಡಪ್ರಭ ವಾರ್ತೆ ಹರಪನಹಳ್ಳಿ
111 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾಣಾಧಿಕಾರಿ ಎಂದು ಅಲ್ಲಾಭಕ್ಷಿ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಭಾನುವಾರ ನಡೆದ ಸ್ಥಳೀಯ ಅಂಜುಮನ್ ಎ-ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು.ಅಂಜುಮನ್ ಸಂಸ್ಥೆಯಲ್ಲಿ ಒಟ್ಟು 5547 ಮತದಾರರಿದ್ದು, ಈ ಪೈಕಿ ಸಿ.ಜಯಾದ್, ಎನ್.ಎಂ. ನೂರ್ ಅಹಮದ್ ಹಾಗೂ ಮುಸ್ತಾಕ್ ಮೌಲಾನ್ ಸೇರಿ ಒಟ್ಟು ಮೂರು ಜನ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಚುನಾವಣೆ ಕೇಂದ್ರದಲ್ಲಿ ಒಟ್ಟು7 ಮತಗಟ್ಟೆ ತೆರೆಯಲಾಗಿತ್ತು. ಬೆಳಗ್ಗೆ 8ಕ್ಕೆ ಮತದಾನ ಆರಂಭವಾಗಿತ್ತು, ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸಿದರು. ಮತಗಟ್ಟೆ ಹೊರಗೆ ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೆ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರನ್ನು ಮನವೊಲಿಸುತ್ತಿರುವ ದೃಶ್ಯ ಕಂಡು ಬಂತು,ಅಭ್ಯರ್ಥಿ ಸಿ.ಜಯಾದ್ ಸ್ಥಳೀಯ ನಿವಾಸಿಯಾಗಿದ್ದು, ನೂರ ಅಹಮದ್ ಮೂಲತಃ ಕೂಡ್ಲಿಗಿ ತಾಲೂಕಿನವರಾಗಿದ್ದಾರೆ. ಮಾಜಿ ಸಚಿವ ಎನ್.ಎಂ.ನಬೀ ಅವರ ಪುತ್ರರು ಹೀಗಾಗಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟ ಹಿನ್ನೆಲೆ ಮತಗಟ್ಟೆ ಬಳಿ ಕಾರ್ಯಕರ್ತರ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆಯುತ್ತಿತ್ತು, ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸುತ್ತಿದ್ದರು.
ಇದೇ ಮೊದಲ ಬಾರಿಗೆ ಅಂಜುಮನ್ ಸಂಸ್ಥೆ ಅಧ್ಯಕ್ಷರ ಚುನಾವಣೆ ಇಷ್ಟೊಂದು ಜಿದ್ದಾಜಿದ್ದಿನಿಂದ ಕೂಡಿದೆ ಎನ್ನಲಾಗಿದ್ದು, ಮತ ಕೇಂದ್ರ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಿಸಿಕ್ಯಾಮೆರಾ ಅಳವಡಿಸಲಾಗಿತ್ತು.ಮತಗಟ್ಟೆ ಕೇಂದ್ರ ಸುತ್ತ ಹರಪನಹಳ್ಳಿ ಮತ್ತು ಹೂವಿನಹಡಗಲಿ ಪೊಲೀಸರಿಂದ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಸಂಜೆ 5 ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು ಶೇ. 81ರಷ್ಟು ಮತದಾನ ದಾಖಲಾಗಿದೆ.