ನಿಂಗರಾಜ ಬೇವಿನಕಟ್ಟಿ ನರೇಗಲ್ಲ
ಕನ್ನಡಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮಸ್ಥಳ ಜಕ್ಕಲಿಯಲ್ಲಿ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಥಕ್ಕೆ ಭಾನುವಾರ ಚಾಲನೆ ನೀಡಲಾಯಿತು.ಈ ಹಿನ್ನೆಲೆಯಲ್ಲಿ ಜಕ್ಕಲಿ ಗ್ರಾಮದಲ್ಲಿಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಂದರಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ಗ್ರಾಮದುದ್ದಕ್ಕೂ ತಳಿರು ತೋರಣಗಳಿಂದ ಅಲಂಕೃತಗೊಂಡಿದೆ. ಪಂಚಾಯಿತಿ ಆವರಣ, ದೊಡ್ಡಮೇಟಿ ಅವರ ಮನೆಯ ಮುಂಭಾಗದಿಂದ ಅನ್ನದಾನೇಶ್ವರ ಮಠದ ವರೆಗೆ ತೆಂಗಿನ ಗರಿ, ಕನ್ನಡದ ಧ್ವಜಗಳು ಹಾರಾಡುತ್ತಿದ್ದವು. ರಥಬೀದಿಯುದ್ದಕ್ಕೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ರಂಗೋಲಿಯಿಂದ ಶೃಂಗರಿಸಿದ್ದರು. ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಭಾನುವಾರ ಜಕ್ಕಲಿ ಗ್ರಾಮ ಸಂಪೂರ್ಣ ಕನ್ನಡಮಯವಾಗಿತ್ತು.
ವಾದ್ಯಮೇಳಗಳು: ಮೆರವಣಿಗೆಯುದ್ದಕ್ಕೂ ಕೊಣ್ಣೂರಿನ ಬೊಂಬೆ ವೇಷಧಾರಿಗಳು ನೃತ್ಯ ಮಾಡುತ್ತಾ ಕನ್ನಡದ ಮನಸ್ಸುಗಳನ್ನು ತಣಿಸಿದರೆ, ಹೊಸಳ್ಳಿಯ ಮಹಿಳಾ ಹಾಗೂ ಪುರುಷರ ಡೊಳ್ಳಿನ ತಂಡಗಳು ಹುಬ್ಬೇರಿಸುವಂತೆ ಮಾಡಿದರು, ಕರಡಿ ಮಜಲು, ಜಾಂಜಮೇಳ, ಶಾಲಾ ಮಕ್ಕಳಿಂದ ಡ್ರಮ್ ಸೆಟ್ ಹೀಗೆ ಹತ್ತು ಹಲವಾರು ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡಕ್ಕಾಗಿ ಹೋರಾಟ ಮಾಡಿದ ಹಲವಾರು ಮಹನೀಯರ ವೇಷಭೂಷಣದಲ್ಲಿ ಪ್ರದರ್ಶನ ತೋರ್ಪಡಿಸುವ ಮೂಲಕ ಮತ್ತೆ ಮಹಾತ್ಮಗಾಂಧಿ, ಸುಭಾಶ್ಚಂದ್ರ ಬೋಸ್, ಆಲೂರ ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ರಾಣಿ ಅಬ್ಬಕ್ಕ, ಜಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಅವರಂಥ ಹೋರಾಟಗಾರರ ವೇಷದಲ್ಲಿ ಕಂಗೊಳಿಸಿದರು.
ದಾರಿಯುದ್ದಕ್ಕೂ ಪುಷ್ಪಾರ್ಚನೆ: ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರೆಲ್ಲರೂ ರಥಬೀದಿಯುದ್ದಕ್ಕೂ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಸತತ ಒಂದೂವರೆ ಗಂಟೆಗಳ ಕಾಲ ಪುಷ್ಪವೃಷ್ಟಿಗೈದರು. ಮೆರವಣಿಗೆಯುದ್ದಕ್ಕೂ ಶಾಸಕರನ್ನೊಳಗೊಂಡಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ಕನ್ನಡಾಭಿಮಾನಿಗಳು ಸಂಭ್ರಮದಿಂದ ಭಾಗಿಯಾಗಿದ್ದರು.ಅಲಂಕೃತ ಚಕ್ಕಡಿ:ಕನ್ನಡಾಭಿಮಾನ ಎತ್ತಿ ಹಿಡಿಯಲು ರೈತರು 10ಕ್ಕೂ ಹೆಚ್ಚು ಚಕ್ಕಡಿಗಳನ್ನು ಕನ್ನಡ ಧ್ವಜದಿಂದ ಅಲಂಕರಿಸಿ ತಲೆ ಮೇಲೆ ರುಮಾಲ ಧರಿಸಿ ಅದರಲ್ಲಿ ಮಕ್ಕಳನ್ನು ಕುಳ್ಳರಿಸಿಕೊಂಡು ರಥಬೀದಿಯುದ್ದಕ್ಕೂ ಸಾಗಿದ ರೈತರ ಕನ್ನಡ ಪ್ರೇಮ ಗಮನ ಸೆಳೆಯಿತು.
ಇದೊಂದು ನಿಜಕ್ಕೂ ಸಂತಸದ ಕ್ಷಣ, ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸಿದ್ದ ದೊಡ್ಡಮೇಟಿ ಕುಟುಂಬ ಸ್ಮರಣೆಯ ದ್ಯೋತಕವಾಗಿ ಸಾಹಿತ್ಯ ಸಮ್ಮೇಳನದ ರಥಕ್ಕೆ ಜಕ್ಕಲಿಯ ನಮ್ಮ ಮನೆಯಿಂದಲೇ ಚಾಲನೆ ನೀಡಿದ್ದಾರೆ. ಅದರಲ್ಲೂ ನಮ್ಮ ಅಜ್ಜ ಅಂದಾನಪ್ಪ ದೊಡ್ಡಮೇಟಿ ಕನಸಿನ ಭುವನೇಶ್ವರಿ ಭಾವಚಿತ್ರ ನಮ್ಮ ಮನೆಯಿಂದ ಸಾಹಿತ್ಯ ಸಮ್ಮೇಳನಕ್ಕೆ ಕೊಂಡೊಯ್ಯುತ್ತಿರುವುದು ನಮ್ಮ ಅಜ್ಜನವರ ಹೋರಾಟಕ್ಕೆ ಸಂದ ಗೌರವ, ಈ ಕಾರ್ಯ ಸಾಂಗವಾಗಿ ನೆರವೇರಲು ಸಹಕರಿಸಿದ ಸಮಸ್ತ ಕನ್ನಡದ ಮನಸ್ಸುಗಳಿಗೆ ಹಾಗೂ ಗ್ರಾಮದ ಮುಖಂಡರಿಗೆ ಹಾಗೂ ತಾಯಂದಿರರಿಗೆ ಕೋಟಿಕೋಟಿ ನಮನ ಎಂದು ತಾಪಂ ಮಾಜಿ ಸದಸ್ಯ ಸಂದೇಶ ದೊಡ್ಡಮೇಟಿ ತಿಳಿಸಿದ್ದಾರೆ.ಕನ್ನಡಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಸ್ಥಳದಿಂದಲೇ ಇಂದು 10ನೇ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನದ ತೇರು ಸಾಗುತ್ತಿರುವುದು ಸಮ್ಮೇಳನಕ್ಕೆ ಒಂದು ಮೆರಗು ತಂದಂತೆ, ಅಂತ ಮಹನೀಯರನ್ನು ಸದಾ ಸ್ಮರಿಸಲು ಹೆಚ್ಚು ಹೆಚ್ಚು ಸಾಹಿತ್ಯಿಕ ಕಾರ್ಯಗಳು ನಡೆಯುವಂತಾಗಲಿ ಎಂದು ನಿವೃತ್ತ ಶಿಕ್ಷಕ ಎಂ.ಎಸ್. ದಡೇಸೂರಮಠ ಹೇಳಿದರು.