ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ಬದಲಾದ ಕಚೇರಿಯ ಸಮಯದ ರಿಯಾಲಿಟಿ ಚೆಕ್ ಮಾಡಲು ಕನ್ನಡಪ್ರಭ ಅನೇಕ ಕಚೇರಿಗಳನ್ನು ಸುತ್ತಾಡಿದಾಗ ಬಹುತೇಕ ಕಚೇರಿಗಳು ತೆರೆದಿದ್ದವಾದರೂ ಅಧಿಕಾರಿಗಳು ಬಂದಿದ್ದು ಮಾತ್ರ ತಡವಾಗಿ. ಅದರಲ್ಲೂ ಕೆಲ ಅಧಿಕಾರಿಗಳು ಎಂದಿನಂತೆ ಬೆಳಗ್ಗೆ 10 ಗಂಟೆಗೆ ಆಗಮಿಸಿದರೆ ಮತ್ತೆ ಕೆಲ ಅಧಿಕಾರಿಗಳು 9ಗಂಟೆಗೆ ಆಗಮಿಸಿದರು.
ಕೊಪ್ಪಳ ಆರ್ ಟಿಓ ಕಚೇರಿ, ಜಿಲ್ಲಾಡಳಿತ ಭವನದ ಕಚೇರಿ ಹಾಗೂ ಜಿಲ್ಲಾ ನೋಂದಣಿ ಇಲಾಖೆಯ ಅಧಿಕಾರಿಗಳ ಕಚೇರಿ ಸೇರಿದಂತೆ ಬಹುತೇಕ ಕಚೇರಿ ಸುತ್ತಾಡಿದಾಗ ಬೆಳಗ್ಗೆ 8 ಗಂಟೆಗೆ ತೆರೆದಿದ್ದರೂ ಖಾಲಿ ಖಾಲಿಯಾಗಿದ್ದವು. ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಬಂದಿರಲಿಲ್ಲ. ಆದರೆ, ಸಿಪಾಯಿಗಳು ಬೇಗನೆ ಬಂದು, ಕಚೇರಿ ತೆರೆದಿದ್ದರು. ಕೆಲವರು ಕಚೇರಿ ತೆರೆದು ಉಪಾಹಾರಕ್ಕೆಂದು ಹೋಗಿದ್ದರು.ಬಿಸಿಲಿನ ತಾಪಮಾನ ಇರುವುದರಿಂದ ಸಮಸ್ಯೆಯಾಗುತ್ತದೆ. ತಾಪಮಾನ ಹೆಚ್ಚಳ ಇರುವುದರಿಂದ ಮಧ್ಯಾಹ್ನದ ನಂತರ ಕಚೇರಿಯಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಕಚೇರಿ ಸಮಯ ಬದಲಾಯಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ವರೆಗೂ ಕಚೇರಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ.
ಇನ್ನು ಕೆಲ ಅಧಿಕಾರಿಗಳು ಹೇಳುವುದೇ ಬೇರೆ, ನಾವು ಎಷ್ಟು ಬೇಗ ಬಂದರೂ ಮಧ್ಯಾಹ್ನ ಮನೆಗೆ ಹೋಗಲು ಆಗದಂತೆ ಇರುತ್ತದೆ. ಕೆಲಸ ಕಾರ್ಯ ಹಾಗೂ ಕಚೇರಿಗೆ ಬಂದವರನ್ನು ಕೆಲಸ ಮಾಡಿಕೊಡದೆ ಹಾಗೇ ಕಳುಹಿಸಲು ಆಗುವುದಿಲ್ಲ. ಕಚೇರಿ ಸಮಯ ಮುಗಿಯುವ ವೇಳೆಗೆ ಬರುತ್ತಾರೆ. ಆಗ ಅನಿವಾರ್ಯವಾಗಿ ನಾವು ಕಚೇರಿಯಲ್ಲಿಯೇ ಇರಬೇಕಾಗುತ್ತದೆ. ಸಮಯ ಬದಲಾವಣೆ ನಮಗೂ ಅನುಕೂಲ ಇಲ್ಲ ಎಂದೇ ಹೇಳುತ್ತಾರೆ.
ಬದಲಾದ ಕಚೇರಿ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.