ರಾಜ್ಯ ಗ್ರಾಮ ಪಂಚಾಯಿತಿ ಪಂಚಾಯತಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ । ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಅ. 12ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಲಾಗುವುದು. ಅ.14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಡಿ.ಎನ್. ಜಗದೀಶ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಾದ್ಯಂತ 50 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯಿತಿ ನೌಕರರು ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯದಲ್ಲೂ ನೌಕರರ ಪಾತ್ರ ಮಹತ್ವದ್ದಾಗಿದೆ. ಆದರೆ ಕಡಿಮೆ ವೇತನ ಹಾಗೂ ಸೇವಾ ಭದ್ರತೆಯ ಕೊರತೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ ಎಂದರು.ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಮರ್ಪಕ ವೇತನ ಪರಿಷ್ಕರಣೆ ಹಾಗೂ ಸೇವಾ ಭದ್ರತೆ ದೊರೆತಿಲ್ಲ. ಸರ್ಕಾರ 2026ರ ಮೇ 22ರಂದು ಹೊರಡಿಸಿರುವ ಆದೇಶದಂತೆ ವೇತನ ಪರಿಷ್ಕರಣೆ ಹಾಗೂ ವೇತನ ಶ್ರೇಣಿ ನಿಗದಿಪಡಿಸಲು ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪರಿಷ್ಕರಿಸಿ, ಪರಿಷ್ಕೃತ ವೇತನ ಶ್ರೇಣಿ ನಿಗದಿಪಡಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನ ಹಾಗೂ ವೇತನ ಹೆಚ್ಚಳದ ಆದೇಶ ಜಾರಿಗೊಳಿಸಬೇಕು. ಎಲ್ಲ ಗ್ರಾಮ ಪಂಚಾಯಿತಿ ನೌಕರರಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು. ಗ್ರೇಡ್–1 ಗ್ರಾಮ ಪಂಚಾಯಿತಿಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಮಂಜೂರು ಮಾಡಬೇಕು. ಗ್ರಾಮ ಸಹಾಯಕರಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರಾಮ ಪಂಚಾಯಿತಿಗಳ ನೌಕರರಿಗೆ ಸರ್ಕಾರದಿಂದ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸಿ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಬೇಕು. ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಿ ಸೇವಾ ಭದ್ರತೆ ಹಾಗೂ ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ಡಿ.ಎನ್. ಜಗದೀಶ್ ಮಾತನಾಡಿದರು.