ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲ್ಲ

KannadaprabhaNewsNetwork |  
Published : Oct 10, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ     | Kannada Prabha

ಸಾರಾಂಶ

ಎಸ್‌ಐಆರ್‌ಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಮ್ಯಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಬಿಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ರಮ್ಯಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಕೆ-ಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಸ್‍ಐಆರ್ ಅರ್ಜಿಗಳ ಸ್ವೀಕಾರ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದ್ದು, ಕಾನೂನು ಮತ್ತು ನಿಯಮಾವಳಿಗಳ ಪ್ರಕಾರವೇ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿಚಾರಣೆ ಪ್ರಕ್ರಿಯೆಗಾಗಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು. ವೈಯಕ್ತಿಕ ಅಥವಾ ಇತರೆ ಕಾರಣಗಳಿಂದ ವಿಚಾರಣೆಗೆ ಬರಲು ಸಾಧ್ಯವಾಗದ ಮತದಾರರ ಪಟ್ಟಿ ಸಿದ್ಧಪಡಿಸಿ, ಅವರ ವಿಳಾಸ ಹಾಗೂ ಭಾವಚಿತ್ರ ಆಧರಿಸಿ ಅಧಿಕಾರಿಗಳೇ ನೇರವಾಗಿ ಸ್ಥಳಕ್ಕೆ ತೆರಳಿ ವಿಚಾರಣೆ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿಚಾರಣೆ ಕೇಂದ್ರಗಳಲ್ಲಿ ಒಂದೇ ಬಾರಿಗೆ ನೂರಾರು ಜನರನ್ನು ಕರೆಸುವುದರಿಂದ ಉಂಟಾಗುವ ಗೊಂದಲ ಹಾಗೂ ನೂಕುನುಗ್ಗಲನ್ನು ತಪ್ಪಿಸಲು ಬೂತ್ ಮಟ್ಟದಲ್ಲಿ ಹಂತ-ಹಂತವಾಗಿ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದ್ದು, ಬಿಎಲ್‍ಒ ಹಾಗೂ ರಾಜಕೀಯ ಪಕ್ಷಗಳ ಬಿಎಲ್‍ಎ-2 ಪ್ರತಿನಿಧಿಗಳ ಸಹಕಾರದೊಂದಿಗೆ ದೂರುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆಕ್ಷೇಪಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಅರ್ಜಿ ಸಲ್ಲಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಪ್ರಸ್ತುತ ಸ್ವೀಕೃತವಾಗಿರುವ ಅರ್ಜಿಗಳ ವಿಚಾರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿಚಾರಣೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅರ್ಹ ಯಾವುದೇ ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಿಯಮಬಾಹಿರವಾಗಿ ಅಥವಾ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವುದು ವಿಚಾರಣೆಯಲ್ಲಿ ದೃಢಪಟ್ಟರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ಒಂದೇ ಕಡೆಯಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ಹಾಗೂ ಬಿಎಲ್‍ಒ ಹಂತದಲ್ಲಿ ಆಗುತ್ತಿರುವ ಗೊಂದಲಗಳ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಒಂದು ಕಡೆಯಿಂದ ನೂರಾರು ಅರ್ಜಿಗಳು ಬಂದ ತಕ್ಷಣ ಅವುಗಳನ್ನು ನೇರವಾಗಿ ಅಂಗೀಕರಿಸುವುದಿಲ್ಲ. ಬಿಎಲ್‍ಒ ಹಾಗೂ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಬಿ.ಎಂ ಗೋವಿಂದರಾಜ್, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಹೆಚ್.ಶಬ್ಬೀರ್, ಕೆ.ಪಿ.ಸಂಪತ್ ಕುಮಾರ್, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪಿ.ಎಂ.ಮಂಜುನಾಥ್, ಜಿ.ಹೆಚ್.ಮೋಹನ್ ಕುಮಾರ್, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ