ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ ಸೇವಾ ಅಭಿಯಾನವು ಸಾಯಿಬಾಬಾ ಅವರ ಸ್ಮರಣೆಯಲ್ಲಿ ‘ಒಂದು ಜಗತ್ತು, ಒಂದು ಕುಟುಂಬ, ವಿಶ್ವ ಸಾಂಸ್ಕೃತಿಕ ಮಹೋತ್ಸವ 2025’ ಆಯೋಜಿಸಿತ್ತು. ಕಳೆದ ಆಗಸ್ಟ್ 16 ರಿಂದ ನವೆಂಬರ್ 23 ರವರೆಗೆ ನಡೆದ ಈ ಉತ್ಸವವು ಹಲವು ವೈಶಿಷ್ಟ್ಯಗಳೊಂದಿಗೆ ಎಲ್ಲರ ಗಮನ ಸೆಳೆಯಿತು. ಈ ಸುದೀರ್ಘ ಉತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ಕಲೆ, ನೃತ್ಯ ಮತ್ತು ಸೇವಾ ಉಪಕ್ರಮಗಳೊಂದಿಗೆ 100 ದೇಶಗಳನ್ನು ಒಂದು ವೇದಿಕೆಯಲ್ಲಿ ಬೆಸೆಯಿತು.
100 ಮಾನವತಾವಾದಿಗಳು, 140 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ನಾಯಕರನ್ನು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಿತು. 45ಕ್ಕೂ ಹೆಚ್ಚು ಜಾಗತಿಕ ಚಿಂತಕರು, ಮಾಧ್ಯಮ, ಪತ್ರಿಕೋದ್ಯಮ ಮತ್ತು ನ್ಯಾಯದಾನ ಕ್ಷೇತ್ರದ ಹಲವು ಸಾಧಕರನ್ನು ಈ ವೇಳೆ ಗುರುತಿಸಿ, ಗೌರವಿಸಲಾಯಿತು.ಪುಟ್ಟಪರ್ತಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ‘ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ’ ಎನ್ನುವ ಸಂದೇಶವು ಈಗ ಒಂದು ಪರಂಪರೆಯೇ ಆಗಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಸೇವಾ ಅಭಿಯಾನವು ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಲವು ಸೇವಾ ಉಪಕ್ರಮಗಳನ್ನು ಆರಂಭಿಸಿದೆ. ಸಾಂಸ್ಕೃತಿಕ ಮಹೋತ್ಸವದ ಸಂದರ್ಭದಲ್ಲಿ 126 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರ ಸಮರ್ಪಿಸಲಾಯಿತು. 600 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಉಚಿತ, ಖಾಸಗಿ ಆಸ್ಪತ್ರೆಯು ಇದೀಗ ಉದ್ಘಾಟನೆಗೆ ಸಜ್ಜಾಗಿದೆ.
ಶತಮಾನೋತ್ಸವ ಆಚರಣೆಯು ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾದ ಸಾಯಿ ಸಿಂಫನಿ ಆರ್ಕೆಸ್ಟ್ರಾದ ಪ್ರಸ್ತುತಿಯೊಂದಿಗೆ ಸಂಪನ್ನಗೊಂಡಿದೆ. ಇದರಲ್ಲಿ ವಿಶ್ವದ 60 ದೇಶಗಳ 450 ಕಲಾವಿದರು, 70 ಗಾಯಕರು ಮತ್ತು 200 ವಿದ್ಯಾರ್ಥಿಗಳು ಇದ್ದರು. ಈ ಅದ್ಭುತ ನಾದ ಗೌರವದೊಂದಿಗೆ ಶತಮಾನೋತ್ಸವ ಆಚರಣೆಗಳು ಸಂಪನ್ನಗೊಂಡವು.
ಅಧ್ಯಾತ್ಮ ಸಾಧಕರು ಮತ್ತು ಉತ್ಸಾಹಿ ಸೇವಾವ್ರತಿಗಳು ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು. ವಿವಿಧ ಪ್ರದೇಶಗಳು ಮತ್ತು ಧರ್ಮಗಳು ಪ್ರತಿಧ್ವನಿಸುವ ಶಾಶ್ವತ ಸತ್ಯಗಳು ಮತ್ತು ಜ್ಞಾನವನ್ನು ಮುಕ್ತವಾಗಿ ಹಂಚಿಕೊಂಡರು. ಭಗವಾನ್ ಬಾಬಾ ಅವರ ‘ಏಕತೆಯೇ ದೈವತ್ವ. ಪರಿಶುದ್ಧತೆಯೇ ಜ್ಞಾನೋದಯ’ ಎಂಬ ಸಂದೇಶವನ್ನು ದೃಢಪಡಿಸಿದರು.