ಮಾದಿಗ ಸಮಾಜ ಬಲವರ್ಧನೆಗೆ ಸಂಘಟನೆ ಅಗತ್ಯ: ಎಚ್.ಆಂಜನೇಯ

KannadaprabhaNewsNetwork |  
Published : Nov 26, 2025, 01:45 AM IST
25ಕೆಕೆಡಿಯು2ಎ. | Kannada Prabha

ಸಾರಾಂಶ

ಕಡೂರು, ಮಾದಿಗ ಸಮಾಜವನ್ನು ಗಟ್ಟಿಧ್ವನಿಯಾಗಿ ಬೆಳೆಸಲು ಮಾದರ ಮಹಾಸಭಾ ಮೂಲಕ ಸಂಘಟನಾತ್ಮಕವಾಗಿ ಬಲವರ್ಧನೆ ಗೊಳಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

- ಮಲ್ಲೇಶ್ವರದ ಜಗಜೀವನರಾಂ ಭವನದಲ್ಲಿ ನಡೆದ ಜಿಲ್ಲಾ ಮಾದಿಗ ಮಹಾಸಭೆ : ಕನ್ನಡಪ್ರಭ ವಾರ್ತೆ, ಕಡೂರು

ಮಾದಿಗ ಸಮಾಜವನ್ನು ಗಟ್ಟಿಧ್ವನಿಯಾಗಿ ಬೆಳೆಸಲು ಮಾದರ ಮಹಾಸಭಾ ಮೂಲಕ ಸಂಘಟನಾತ್ಮಕವಾಗಿ ಬಲವರ್ಧನೆ ಗೊಳಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು. ತಾಲೂಕಿನ ಮಲ್ಲೇಶ್ವರದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜಿಲ್ಲಾ ಮಾದಿಗ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಇತರೆ ಸಮುದಾಯ ಶೈಕ್ಷಣಿಕ ಅಭಿವೃದ್ಧಿಗೆ ಮಹಾಸಭಾ ಕಾರ್ಯ ಚಟುವಟಿಕೆ ರೂಪಿಸಲು ಆರಂಭಿಕವಾಗಿ ಸಮುದಾಯದ ಸದಸ್ಯತ್ವ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮಾದಿಗ ಸಮುದಾಯ ಬಹು ದುರ್ಭಲವಾಗಿದೆ. ಈ ಹಿಂದೆ ಹಿರಿಯರು ನಮಗಾಗಿ ಮಾಡಿಟ್ಟಿದ್ದ ಬೆಲೆಬಾಳುವ ಜಾಗ ಇನ್ನಿತರರ ಪಾಲಾಗಿದೆ. ಒಳಮೀಸಲಾತಿ ಅನುಷ್ಠಾನದಿಂದ ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಮೀಸಲಾತಿ ದೊರೆತಿದೆ. ಒಳಮೀಸಲಾತಿ ಮೊದಲ ಫಲಾನುಭವಿಗಳೇ ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆಗ್ ಶಿಕ್ಷಣದಲ್ಲಿ ದೊರೆತ ಮೀಸಲಾತಿ ಸದುಪಯೋಗವಾಗಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಇತರೆ ಪ್ರಭಲ ಸಮಾಜಗಳು ಸಂಘಟನೆ ಮೂಲಕ ಮತ್ತಷ್ಟು ಪ್ರಭಲವಾಗುತ್ತಲೇ ಇವೆ. ಆದರೆ ನಮ್ಮ ಸಮಾಜಕ್ಕೆ ಒಳಮೀಸಲಾತಿ ಪ್ರಕಾರ ಶೇ.6 ರಷ್ಟು ಮೀಸಲಾತಿ ಮಾದಿಗ ಸಮುದಾಯಕ್ಕೆ ದೊರೆಯಲೇಬೇಕು ಎಂಬುದು ನನ್ನ ಆಗ್ರಹ ಎಂದರು. ರಾಜಕೀಯ ಮೀಸಲಾತಿ ಶಕ್ತಿ ನಮ್ಮ ಸಮುದಾಯಗಳಿಗೆ ಬರಬೇಕು ಎಂಬುದು ನಮ್ಮೆಲ್ಲರ ಒತ್ತಾಸೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪರವಾಗಿದ್ದಾರೆಂಬುದು ಸಮಾಧಾನಕರ ಸಂಗತಿ. ಒಟ್ಟಾರೆ ಇಡೀ ಮಾದಿಗ ಸಮುದಾಯ ಒಂದು ವೇದಿಕೆಯಡಿ ಪಕ್ಷಾತೀತವಾಗಿ ಸಂಘಟಿತವಾದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಇದಕ್ಕೆ ಪೂರಕವಾಗಿ ಮಾದರ ಮಹಾಸಭಾ ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ರಾಜಕೀಯವಾಗಿ ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ಕಡಿಮೆ ಯಾಗಿದೆ. ಜಿಲ್ಲೆ ಅಥವಾ ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದರೂ ನಮ್ಮ ಸಮುದಾಯದವರಾರೂ ಆಯ್ಕೆ ಯಾಗುತ್ತಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಸುಪ್ರಿಂ ಕೋರ್ಟಿನ ಸ್ಪಷ್ಟ ತೀರ್ಪು ಇದ್ದರೂ ಅದು ಜಾರಿಯಾಗಬಾರದೆಂಬ ಆಶಯ ನಮ್ಮ ಸಹೋದರ ಸಮಾಜಗಳಲ್ಲಿತ್ತು. ಆದರೆ ನಮ್ಮ ಸಮಾಜದ ಮುಖಂಡರ ಶ್ರಮದಿಂದ ಒಳಮೀಸಲಾತಿ ದೊರೆತಿ ರುವುದು ಸಂತಸಕರ. ಇಲ್ಲಿಂದ ಮುಂದಕ್ಕಾದರೂ ಪಕ್ಷ ಬೇಧ ಮರೆತು ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಸಣ್ಣ ಪುಟ್ಟ ವೈಮನಸ್ಸು ಮರೆತು ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು. ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ವಿಧಾನ ಸೌಧದಲ್ಲಿ ಸಹ ನಮ್ಮ ಧ್ವನಿ ಹೆಚ್ಚಾಗಿ ಸದ್ದು ಮಾಡುತ್ತಿಲ್ಲ. ಇದಕ್ಕೆ ಕಾರಣ ನಮ್ಮನ್ನು ಪ್ರತಿನಿಧಿಸುವ ಸದಸ್ಯರ ಕೊರತೆ ಕಾಡುತ್ತಿದೆ. ನಮ್ಮ ಸಮಯದಾಯದ ಸದಸ್ಯರ ಸಂಖ್ಯೆ ಹೆಚ್ಚಾದರೆ ನಮ್ಮ ಧ್ವನಿಗೆ ಹೆಚ್ಚಿನ ಬೆಲೆ ಬರುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ ಸಮುದಾಯಕ್ಕೆ ಸ್ಪಂದಿಸು ತ್ತಿದೆ. ಸಿದ್ದರಾಮಯ್ಯರಂತಹ ಮುಖ್ಯಮಂತ್ರಿಯಿದ್ದರೂ ಒಳಮೀಸಲಾತಿ ಪೂರ್ಣ ಮಟ್ಟದ ಜಾರಿಗೆ ವಿಳಂಬ ವಾಗುತ್ತಿದೆ. ಇಡೀ ಮಾದಿಗ ಸಮುದಾಯ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು. ಚುನಾವಣೆ ಸಂದರ್ಭಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಮಾದಿಗರು ಮಾರಾಟವಾಗುತ್ತಿರುವುದು ನೋವಿನ ಸಂಗತಿ. ನಮ್ಮ ಮಾದಿಗ ಸಮುದಾಯದವರು ನೆಮ್ಮದಿ ಬದುಕು ಬಾಳಲು ಸ್ವಾಭಿಮಾನದ ಹೋರಾಟ ಮಾಡಬೇಕು. ಇದಕ್ಕಾಗಿ ಮಾದಿಗ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು. ಸಮಾಜದ ಮುಖಂಡ ಎಂ.ಎಚ್. ಚಂದ್ರಪ್ಪ ಮಾತನಾಡಿ, ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ಮತಕ್ಕಾಗಿ ಉಪಯೋಗಿಸಿಕೊಂಡಿವೆಯಾದರೂ ಯಾವುದೇ ಸೌಲಭ್ಯ ನೀಡದೆ ಉಪೇಕ್ಷೆ ಮಾಡುತ್ತಲೇ ಬಂದಿವೆ. ಇದು ಕೊನೆಗಾಣಬೇಕು. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಎತ್ತರಕ್ಕೇರಬೇಕೆಂಬ ಆಶಯ ಸಾಕಾರವಾಗಲು ಸಂಘಟನೆಯೊಂದೇ ಪರಿಹಾರ ಎಂದರು. ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಜಿ. ಕೃಷ್ಣಸ್ವಾಮಿ,ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಜಗದೀಶ್, ನಿವೃತ್ತ ಡಿಡಿಪಿಐ ಎಚ್.ಎನ್. ರುದ್ರಸ್ವಾಮಿ, ತಂಗಲಿ ರಾಘವೇಂದ್ರ ಶೂದ್ರ ಶ್ರೀನಿವಾಸ್, ಬಿ.ಟಿ. ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಪ್ರಮೋದ್, ಬಳ್ಳೇಕೆರೆ ಸಂತೋಷ್, ಜಗದೀಶ್, ಕೃಷ್ಣಪ್ಪ, ಚಿಕ್ಕಿಂಗಳ ಲಕ್ಷ್ಮಣ್, ಪಟ್ಟಣಗೆರೆ ಸಗುನಪ್ಪ, ನಾರಾಯಣ ಮೂರ್ತಿ, ಈಶ್ವರಪ್ಪ ಬೀರೂರು ಎನ್.ಗಿರೀಶ್, ಹಾಗೂ ಜಿಲ್ಲೆಯ ದಲಿತ ಸಂಘಟನೆ ಮುಖಂಡರು ಭಾಗವಹಿಸಿದ್ದರು. 25ಕೆಕೆಡಿಯು2, 2ಎ... ಕಡೂರು ತಾಲೂಕಿನ ಮಲ್ಲೇಶ್ವರದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ, ಜಿಲ್ಲಾ ಮಾದಿಗ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿದರು. ಮಂಜುನಾಥ್, ಬಿ.ಎನ್. ಚಂದ್ರಪ್ಪ, ರುದ್ರಸ್ವಾಮಿ, ಚಂದ್ರಪ್ಪ ಮತ್ತಿತರಿದ್ದರು.

PREV

Recommended Stories

ಕುರ್ಚಿ ಕಸರತ್ತಿನ ಬಗ್ಗೆ ಇಂದು ಹೈಕಮಾಂಡ್‌ ಮಹತ್ವದ ಸಭೆ
ಜಲಾನಯನ ನಿರ್ವಹಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿ: ಚಲುವರಾಯಸ್ವಾಮಿ