ಗದಗ: ಆ. 15ರಂದು ಜರುಗುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥಿತವಾಗಿ ಜರುಗುವಂತೆ ಸಂಬಂಧಿತ ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ. ಎಚ್.ಕೆ. ಪಾಟೀಲ ಅವರು ಆ.15ರಂದು ಬೆಳಿಗ್ಗೆ 9 ಕ್ಕೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಕ್ರೀಡಾಂಗಣದಲ್ಲಿ ನೆರೆದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುವರು. ಬೆಳಗ್ಗೆ 8.30ರೊಳಗಾಗಿ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಕ್ರೀಡಾಂಗಣದಲ್ಲಿ ತಮ್ಮ ಇಲಾಖಾ ಸಿಬ್ಬಂದಿಗಳೊಂದಿಗೆ ಹಾಜರಿರಬೇಕು. ಅಲ್ಲದೇ ಶಾಲಾ ಕಾಲೇಜುಗಳಲ್ಲಿಯೂ ಮಕ್ಕಳು ಧ್ವಜಾರೋಹಣ ನೆರವೇರಿಸಿ 8.30 ರೊಳಗಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ನಿಗದಿಪಡಿಸಿದ ಸ್ಥಳದಲ್ಲಿ ಆಸೀನರಾಗಬೇಕು. ಈ ಕುರಿತು ಶಾಲಾ ಶಿಕ್ಷಕರು ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆ.15ಕ್ಕೂ ಮೊದಲು ಮೂರು ದಿನ ಮುಂಚಿತವಾಗಿಯೇ ನಗರಸಭೆಯ ಅಧಿಕಾರಿಗಳು ನಗರದ ಪ್ರಮುಖ ವೃತ್ತಗಳ ಸ್ವಚ್ಛತೆಗೆ ಹಾಗೂ ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆಗೆ ಆದ್ಯತೆ ವಹಿಸಿ ಶುಚಿಗೊಳಿಸಬೇಕು. ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಮುಂಚಿತಾಗಿಯೇ ದೀಪಾಲಂಕಾರ ಮಾಡಬೇಕು ಎಂದು ಸೂಚಿಸಿದರು.ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ನಗರ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಕರೆತರುವ ವ್ಯವಸ್ಥೆ ಮಾಡಬೇಕು. ಈ ಕುರಿತಂತೆ ತಮ್ಮ ಇಲಾಖಾ ವ್ಯಾಪ್ತಿಯ ಅಧಿಕಾರಿ ಹಾಗೂ ಶಿಕ್ಷಕರುಗಳಿಗೆ ಹೊಣೆಗಾರಿಕೆ ನೀಡಬೇಕು. ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ತೆರಳದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ವಿವಿಧ ಇಲಾಖಾಧಿಕಾರಿಗಳಿಗೆ ನೀಡಲಾದ ಹೊಣೆಗಾರಿಕೆಯನ್ನು ಚಾಚೂ ತಪ್ಪದೇ ಎಲ್ಲರೂ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಇದ್ದು ಪೂರ್ಣಗೊಳಿಸುವುದರೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಾಗೂ ವಿಜೃಂಭಣೆಯಿಂದ ನೆರವೇರಲು ಸಮನ್ವಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಡಿಡಿಪಿಐ ಆರ್.ಎಸ್.ಬುರುಡಿ, ಜಿಲ್ಲಾ ಉಪಸಮನ್ವಯಾಧಿಕಾರಿ ಎಮ್.ಎಚ್.ಕಂಬ್ಳಿ, ಬಿಇಓ ವಿ.ವಿ.ನಡುವಿನಮನಿ, ಶೆಟ್ಟೆಪ್ಪನವರ, ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕ್ರೀಡಾ ಇಲಾಖೆಯ ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ್ ಸೋಪಡ್ಲಾ, ಕಂದಾಯ ನಿರೀಕ್ಷಕರ ಭಜಂತ್ರಿ ಸೇರಿದಂತೆ ಇತರರು ಹಾಜರಿದ್ದರು.