ಕಸಾಪ ಚುನಾವಣೆ ಘೋಷಣೆಗೂ ಮುನ್ನವೇ ಬಹಿರಂಗ ಪ್ರಚಾರ

KannadaprabhaNewsNetwork |  
Published : Oct 27, 2026, 01:45 AM IST
೨೬ಕೆಎಂಎನ್‌ಡಿ-೮ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿಯಾಗಿರುವ ಕೆ.ಟಿ. ಹನುಮಂತು ಅವರು ಕೆರಗೋಡು ಹೋಬಳಿ, ಹಲ್ಲೆಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಬೆಂಬಲಿಸುವಅತೆ ಮನವಿ ಮಾಡಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆಗಲೇ ಸಾಹಿತ್ಯ ಪರಿಷತ್ತಿನೊಳಗೆ ಪ್ರಚಾರದ ಚಟುವಟಿಕೆಗಳು ಗರಿಗೆದರಿವೆ. ಚುನಾವಣಾ ಕರಪತ್ರಗಳನ್ನು ಹಿಡಿದು ಅಧಿಕೃತವಾಗಿ ಪ್ರಚಾರವನ್ನೂ ಆರಂಭಿಸಲಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆಗಲೇ ಸಾಹಿತ್ಯ ಪರಿಷತ್ತಿನೊಳಗೆ ಪ್ರಚಾರದ ಚಟುವಟಿಕೆಗಳು ಗರಿಗೆದರಿವೆ. ಚುನಾವಣಾ ಕರಪತ್ರಗಳನ್ನು ಹಿಡಿದು ಅಧಿಕೃತವಾಗಿ ಪ್ರಚಾರವನ್ನೂ ಆರಂಭಿಸಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಕೆ.ಟಿ.ಹನುಮಂತು ಪ್ರಮುಖ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿಯೇ ಸಾಹಿತ್ಯ ಪರಿಷತ್ತಿನ ಚುನಾವಣಾ ಅಖಾಡಕ್ಕೆ ಪ್ರವೇಶಿಸಬೇಕಿತ್ತಾದರೂ ಅಂತಿಮ ಹಂತದಲ್ಲಿ ಹಿಂದೆ ಸರಿದಿದ್ದರು. ಇದೀಗ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿಯೇ ಪೂರ್ವ ತಯಾರಿಗಳನ್ನು ಆರಂಭಿಸಿದರು. ತಮ್ಮದೇ ತಂಡವನ್ನು ಕಟ್ಟಿಕೊಂಡು ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆ ನೀಡಿದರು. ಕಸಾಪ ಪದಾಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಒಳಗೊಳಗೆ ಪ್ರಚಾರ ನಡೆಸುತ್ತಿದ್ದರು.

ಇವರೊಂದಿಗೆ ಕೀಲಾರ ಕೃಷ್ಣೇಗೌಡ, ಹರ್ಷ ಪಣ್ಣೇದೊಡ್ಡಿ, ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್ ಸೇರಿದಂತೆ ಇನ್ನೂ ಹಲವರು ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ. ಇವರೂ ಸಹ ಬಹಿರಂಗವಾಗಿ ಚುನಾವಣಾ ಅಖಾಡ ಪ್ರವೇಶಿಸದೆ ತೆರೆ-ಮರೆಯಲ್ಲಿ ಕಸಾಪ ಪದಾಧಿಕಾರಿಗಳನ್ನು ಭೇಟಿಯಾಗುತ್ತು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಕೆ.ಟಿ.ಹನುಮಂತು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಕರಪತ್ರಗಳನ್ನು ಮುದ್ರಿಸಿ ಮಂಡ್ಯ ತಾಲೂಕಿನ ಹಲ್ಲೇಗೆರೆಯಲ್ಲಿ ಬಹಿರಂಗವಾಗಿ ಹಂಚುವ ಮೂಲಕ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಆರಂಭಿಸಿರುವುದು ಅಖಾಡ ರಂಗೇರುವಂತೆ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಸಾಪ ಚುನಾವಣಾ ಕಾರ್ಯಚಟುವಟಿಕೆಗಳು ಉಳಿದ ಸ್ಪರ್ಧಾಕಾಂಕ್ಷಿಗಳಿಂದಲೂ ಬಿರುಸನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹಿರಿಯರ ಸಾಹಿತಿಗಳ ನಿರ್ಧಾರ ಕುತೂಹಲ:

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸುವ ಪ್ರಯತ್ನ ಈ ಬಾರಿಯೂ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡರ ನೇತೃತ್ವದಲ್ಲಿ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಡಿ.ಪಿ.ಸ್ವಾಮಿ, ಡಾ.ಮೀರಾಶಿವಲಿಂಗಯ್ಯ ಸೇರಿದಂತೆ ಹಲವು ಹಿರಿಯರ ಸಮ್ಮುಖದಲ್ಲಿ ನಡೆಯುವ ಸಾಧ್ಯತೆಗಳಿವೆ. ಆದರೆ, ಪ್ರೊ.ಎಚ್.ಎಸ್.ಮುದ್ದೇಗೌಡರು ಕಳೆದ ಬಾರಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಬೆಂಬಲಕ್ಕೆ ನಿಂತರೆಂಬ ಕಾರಣಕ್ಕೆ ಅವರೊಂದಿಗೆ ಒಡಕಿದೆ. ಆ ಬಿರುಕನ್ನು ಮುಚ್ಚುವ ಪ್ರಯತ್ನ ಯಾರಿಂದಲೂ ನಡೆದಿಲ್ಲ. ಇದನ್ನು ಮನಗಂಡಿರುವ ಕೆ.ಟಿ.ಹನುಮಂತು ಅವರು ಬಹಳ ಎಚ್ಚರಿಕೆಯಿಂದ ಕಸಾಪ ಚುನಾವಣಾ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡರ ಸಹೋದರರೇ ಆಗಿರುವುದರಿಂದ ಅವರ ಕೃಪಾಶೀರ್ವಾದವೂ ಕೆ.ಟಿ.ಹನುಮಂತು ಅವರ ಮೇಲಿದೆ.

ಹಿರಿಯ ಸಾಹಿತಿಗಳು ಒಮ್ಮತದ ಅಭ್ಯರ್ಥಿಯಾಗಿ ಯಾರನ್ನಾದರೂ ಕಣಕ್ಕೆ ಇಳಿಸಿದ್ದೇ ಆದಲ್ಲಿ ಕೆ.ಟಿ.ಹನುಮಂತು ಪರ ನಿಲ್ಲಬಹುದೆಂಬ ಮಾತುಗಳು ಹಲವರಿಂದ ಕೇಳಿಬರುತ್ತಿದೆ. ಕೆ.ಟಿ.ಹನುಮಂತು ಅವರ ಬಗ್ಗೆ ಹಿರಿಯ ಸಾಹಿತಿಗಳಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಉತ್ತಮ ವ್ಯಕ್ತಿತ್ವ, ವಾಕ್ಚಾತುರ್ಯವನ್ನು ಹೊಂದಿರುವ ಕೆ.ಟಿ.ಹನುಮಂತುರವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳೂ ಇವೆ. ಕೊನೆಯ ಘಳಿಗೆಯಲ್ಲಿ ಹಿರಿಯ ಸಾಹಿತಿಗಳ ತೀರ್ಮಾನ ಏನಾಗಬಹುದೆಂಬ ಬಗ್ಗೆ ಸಹಜವಾಗಿ ಕುತೂಹಲ ಕೆರಳಿಸಿದೆ.

ಸ್ಪರ್ಧೆಗೆ ಇನ್ನಷ್ಟು ಆಕಾಂಕ್ಷಿಗಳು ತಯಾರಿ:

ಇದರ ನಡುವೆ ಕೀಲಾರ ಕೃಷ್ಣೇಗೌಡರು ಹಲವು ಬಾರಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಸೋಲಿನ ಅನುಕಂಪ ತಮ್ಮ ಕೈ ಹಿಡಿಯಬಹುದೆಂಬ ನಂಬಿಕೆಯೊಂದಿಗೆ ಮರಳಿ ಯತ್ನವ ಮಾಡು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರೂ ಸಹ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವುದರಿಂದ ಈ ಬಾರಿ ಗೆದ್ದೇ ಗೆಲ್ಲುವೆನೆಂಬ ಅಪರಿಮಿತ ಉತ್ಸಾಹದಲ್ಲಿದ್ದು ಏಕಾಂಗಿಯಾಗಿ ಚುರುಕಿನಿಂದ ಓಡಾಡುತ್ತಿದ್ದಾರೆ. ಹಿರಿಯ ಸಾಹಿತಿಗಳು ತಮ್ಮ ಬೆಂಬಲಕ್ಕೆ ನಿಲ್ಲದಿದ್ದರೂ ಸ್ಪರ್ಧೆ ಖಚಿತ ಎಂಬ ಭಾವನೆಯೊಂದಿಗೆ ದಿಟ್ಟ ಹೋರಾಟ ನೀಡಲು ಸಜ್ಜಾಗಿದ್ದಾರೆ.

ಪಣ್ಣೆದೊಡ್ಡಿ ಹರ್ಷ, ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್‌ಗೆ ಇದು ಮೊದಲ ಚುನಾವಣೆ. ಪಣ್ಣೇದೊಡ್ಡಿ ಹರ್ಷ ಮದ್ದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮೀರಾ ಶಿವಲಿಂಗಯ್ಯ ಗರಡಿಯಲ್ಲಿ ಪಳಗಿರುವ ಅವರು ಕಸಾಪ ಪದಾಧಿಕಾರಿಗಳೊಂದಿಗೆ ನಿಕಟ ಸಂಪರ್ಕವನ್ನೂ ಹೊಂದಿದ್ದಾರೆ. ಮೀರಾ ಶಿವಲಿಂಗಯ್ಯ ಸೇರಿದಂತೆ ಹಿರಿಯ ಸಾಹಿತಿಗಳ ಬೆಂಬಲವನ್ನೂ ಪಡೆದುಕೊಂಡು ಚುನಾವಣೆಗೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ.

ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್ ಅವರು ಕನ್ನಡಪರ ಸಂಘಟನೆಯಿಂದ ಬೆಳೆದುಬಂದು ಕನ್ನಡ ತೇರನ್ನು ಎಳೆಯುವುದಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ವೃಕ್ಷಾಂತರಂಗ ಪುಸ್ತಕವನ್ನು ರಚಿಸಿ ತಮ್ಮಲ್ಲಿರುವ ಸಾಹಿತ್ಯದ ಅಭಿರುಚಿಯನ್ನು ಸಾಹಿತ್ಯಾಭಿಮಾನಿಗಳಿಗೆ ಉಣಬಡಿಸಿದ್ದಾರೆ. ಪರಿಷತ್ ಅಧ್ಯಕ್ಷನಾಗಿ ತಮ್ಮಿಂದ ಮಾಡಬಹುದಾದ ಕಾರ್ಯಗಳ ಬಗ್ಗೆ ಪದಾಧಿಕಾರಿಗಳಿಗೆ ತಿಳಿಸಿಕೊಡುತ್ತಾ ಅವರೂ ಸಹ ಅಬ್ಬರವಿಲ್ಲದೆ ಒಳಗೊಳಗೆ ಚುನಾವಣಾ ಕಾರ್ಯಚಟುವಟಿಕೆಗಳನ್ನು ಬಿರುಸಾಗಿ ನಡೆಸುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದತ್ತ ಕೆ.ನಾಗೇಶ್ ಒಲವು:

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಘೋಷಣೆಯಾಗುವ ವೇಳೆಗೆ ಮತ್ತಷ್ಟು ಆಕಾಂಕ್ಷಿಗಳು ಅಖಾಡ ಪ್ರವೇಶಿಸಿದರೂ ಆಶ್ಚರ್ಯವಿಲ್ಲ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಕೆ.ನಾಗೇಶ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರವೇಶಕ್ಕೂ ಮುಂದಾಗಿದ್ದಾರೆ. ಸಚಿವ ಎನ್.ಚಲುವರಾಯಸ್ವಾಮಿ ಮೂಲಕ ಹಿರಿಯ ಸಾಹಿತಿಗಳ ಬೆಂಬಲ ಗಳಿಸಿಕೊಂಡು ಅಖಾಡ ಪ್ರವೇಶಿಸುವುದಕ್ಕೆ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರೂ ಅಖಾಡ ಪ್ರವೇಶಿಸಿದರೆ ಚುನಾವಣೆ ಮತ್ತಷ್ಟು ರಂಗೇರುವುದರಲ್ಲಿ ಆಶ್ಚರ್ಯವಿಲ್ಲ.

ಜಿಲ್ಲಾ ಕಸಾಪ ಚುನಾವಣೆಯಲ್ಲಿ ಬೆಂಬಲಿಸಿ: ಕೆ.ಟಿ. ಹನುಮಂತು

ಕನ್ನಡಪ್ರಭ ವಾರ್ತೆ, ಮಂಡ್ಯ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿಯಾಗಿರುವ ಕೆ.ಟಿ. ಹನುಮಂತು ಅವರು ಕೆರಗೋಡು ಹೋಬಳಿಯ ಹಲ್ಲೆಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಇಂದಿನ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವಜನರನ್ನು ಓದಿನತ್ತ ಆಕರ್ಷಿಸಲು ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಹೊಂದಿರುವುದಾಗಿ ಹೇಳಿದರು.

ಪ್ರತಿ ಮನೆಯಲ್ಲೂ ಪುಸ್ತಕಗಳನ್ನು ಸಂಗ್ರಹಿಸುವ ಮತ್ತು ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವನ್ನು ಕಸಾಪ ಮೂಲಕ ಜಿಲ್ಲಾದ್ಯಂತ ನಿರಂತರವಾಗಿ ಹಮ್ಮಿಕೊಳ್ಳುವ ಆಲೋಚನೆ ಇದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ನಿವೃತ್ತ ಪ್ರಾಂಶುಪಾಲ ಸಿದ್ದರಾಜು, ಉಪನ್ಯಾಸಕ ಪಂಚಲಿಅಗೇಗೌಡ, ಬೋರೇಗೌಡ, ರಂಗಸ್ವಾಮಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು