ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ತೇಜಸ್ವಿ ತಬಲಾ ವಿದ್ಯಾಲಯ ಹಮ್ಮಿಕೊಂಡಿದ್ದ ನಾದವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆಗಳ ಕಲಿಕೆಗೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಲಿಕೆಯಲ್ಲಿ ಗುರು-ಶಿಷ್ಯರ ಸಂಬಂಧ ಉತ್ತಮವಾಗಿ ಇರಬೇಕು. ತನಗೆ ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಕಲಿಸುವ ಮನಸ್ಥಿತಿ ಗುರುವಿಗೆ ಇರಬೇಕು. ಒಂದು ವರ್ಷ ಕಲಿತರೆ ಸಾಕು ಎಂಬ ಪೋಷಕರ ಮನಸ್ಥಿತಿ ಬದಲಾಗಬೇಕು. ದೀರ್ಘಕಾಲದ ಪರಿಶ್ರಮದ ಕಲಿಕೆಯಿಂದ ಮಾತ್ರ ಕಲೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆಯಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಟಿ.ಎಸ್. ರಾಘವೇಂದ್ರ ಮಾತನಾಡಿ, ತಬಲಾ ನುಡಿಸಿದರೆ ನಾದ, ಮಾಧುರ್ಯ ಸೃಷ್ಟಿಯಾಗಬೇಕು. ನಾದದ ಮಾಧುರ್ಯ ಕೇಳುಗರ ಹೃದಯವನ್ನು ತಟ್ಟಬೇಕು. ಮನಸ್ಸನ್ನು ಮುಟ್ಟಬೇಕು. ತಬಲಾ ಕಲಿಯುವ ವಿದ್ಯಾರ್ಥಿಗಳು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಬಲಾ ಕಲಿಕೆಗೆ ದೀರ್ಘ ಕಾಲದ ಸಂಯಮ, ಏಕಾಗ್ರತೆ ಬಯಸುತ್ತದೆ. ಸತತ ಅಭ್ಯಾಸದಿಂದ ಕರಗತ ಮಾಡಿಕೊಳ್ಳಬೇಕು. ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ದೊರಕುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಮತಾ ರಾಜಕುಮಾರ್ ಸ್ವಾಗತಿಸಿದರು. ವಿದುಷಿ ಚೇತನಾ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಚನಾ ನಿರೂಪಿಸಿದರು. ಸತ್ಯವತಿ ವಂದಿಸಿದರು.
ಸಾಗರದಲ್ಲಿ ನಾದವೈಭವ ಕಾರ್ಯಕ್ರಮವನ್ನು ಪುರುಷೋತ್ತಮ ತಲವಾಟ ಉದ್ಘಾಟಿಸಿದರು.