ಕನ್ನಡಪ್ರಭ ವಾರ್ತೆ ಮೈಸೂರು
ಭಾರತ- ಪಾಕಿಸ್ತಾನ ನಡುವೆ ಯುದ್ಧದ ಮುನ್ಸೂಚನೆ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಶನಿವಾರ ಸಂಜೆ ಆಪರೇಷನ್ ಅಭ್ಯಾಸ್- ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ಜರುಗಿತು.ಅರಮನೆ ಆವರಣದಲ್ಲಿ ವಿಮಾನ ಮಾದರಿ ಹಾರಿತು. ವಿಮಾನ ಹಾರಾಟದ ನಂತರ ಅರಮನೆ ವಿವಿಧ ಸ್ಥಳಗಳಲ್ಲಿ ಬಾಂಬ್ ಬಿದ್ದಂತೆ, ಇದರಿಂದ ಪ್ರವಾಸಿಗರು ಜನರಿಗೆ ತೊಂದರೆ, ಗಾಬರಿಯಾದ ಜನ ಓಡಿದ್ದರಿಂದ ಹಲವರಿಗೆ ಗಾಯವಾದಂತೆ, ಅರಮನೆ ಮುಂಭಾಗದಲ್ಲಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದಂತೆ ಅಣಕು ಪ್ರದರ್ಶಿಸಲಾಯಿತು.
ಈ ವೇಳೆ ಸಿಐಎಸ್ಎಫ್, ಪೊಲೀಸ್, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ, ಫೊರೆನ್ಸಿಕ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ದಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಾಯಾಳನ್ನು ರಕ್ಷಣೆ ಮಾಡಿದರು.ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಮೈಸೂರು ಅರಮನೆಯಲ್ಲಿ ಶನಿವಾರ ಸಂಜೆ 5 ರಿಂದ 6 ಗಂಟೆಯವರೆಗೆ ತುರ್ತು ಪರಿಸ್ಥಿತಿ ಎಚ್ಚರಿಕೆಯ ಸೈರನ್ ಮೊಳಗಿಸಿ, ಮಾಕ್ ಡ್ರಿಲ್ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಿಐಎಸ್ಎಫ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಗೃಹರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತವಾಗಿ ಆಯೋಜಿಸಿದ್ದ ನಾಗರಿಕ ರಕ್ಷಣಾ ಅಣಕು ಪ್ರದರ್ಶನದಲ್ಲಿ 3 ವಿಧದ ಸೈರನ್ ಗಳು ಮೊಳಗಿದವು. ತುರ್ತು ಪರಿಸ್ಥಿತಿಯಲ್ಲಿ ಮೂರು ಸೈರನ್ ಸಂದರ್ಭದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.ಈ ವೇಳೆ ಯಾವ ಸೈರನ್ ಗೆ ಹೇಗೆ ಪ್ರತಿಕ್ರಿಯಿಸಬೇಕು, ಬಾಂಬ್ ಸ್ಫೋಟವಾದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಅಣಕು ಪ್ರದರ್ಶನ ಮೂಲಕ ತಿಳಿಸಲಾಯಿತು.
ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಬೆಂಕಿಯಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ಪ್ರದರ್ಶಿಸಿದರು.ವಿವಿಧ ಇಲಾಖೆಗಳ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 500 ಹೆಚ್ಚು ಮಂದಿ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಈ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಡಿಸಿಪಿಗಳಾದ ಎಂ. ಮುತ್ತುರಾಜು, ಸುಂದರ್ ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಮೈಸೂರು ಪ್ರಾಂತ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್. ಜಯರಾಮಯ್ಯ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ. ಗುರುರಾಜ್, ಕೆ. ರಮೇಶ್, ಸಂತೋಷ್ ಕುಮಾರ್ ಮೊದಲಾದವರು ಇದ್ದರು.----
ಕೋಟ್...ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮಾಕ್ ಡ್ರಿಲ್ ಮಾಡಲಾಗಿದೆ. ಅರಮನೆ ಸೆನ್ಸಿಟಿವ್ ಏರಿಯಾ. ಹೀಗಾಗಿ ಇಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ. ಯುದ್ಧದ ವೇಳೆ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದು ಸೇರಿದಂತೆ ಎಲ್ಲದರ ಬಗ್ಗೆಯೂ ಅಣಕು ಪ್ರದರ್ಶನ ಮಾಡಲಾಗಿದೆ. ಅರಮನೆ, ಕಬಿನಿ ಡ್ಯಾಮ್, ಚಾಮುಂಡಿಬೆಟ್ಟ, ಆರ್ ಬಿಐ ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
- ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ----
ಪೊಲೀಸ್ ಇಲಾಖೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಮೈಸೂರು ನಗರಾದ್ಯಂತ ಪೊಲೀಸ್ ಬೀಟ್ಸ್ ಹೆಚ್ಚಿಸಲಾಗಿದೆ. ಸಿಸಿಟಿವಿ ಮೂಲಕ ಕಣ್ಗಾವಲು ಇರಿಸಲಾಗಿದೆ. ಚಾಮುಂಡಿಬೆಟ್ಟ, ಅರಮನೆ, ಆರ್ ಬಿಐ ಸೇರಿದಂತೆ ಎಲ್ಲಾ ಕಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದ ರೀತಿ ಕ್ರಮ ಕೈಗೊಂಡಿದ್ದೇವೆ.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ