ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಪಕ್ಷದ ತೀರ್ಮಾನಕ್ಕೆ ಬದ್ಧ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಅಭ್ಯರ್ಥಿಯಾಗುತ್ತಾರೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈಗಾಗಲೇ ಕೇಂದ್ರ ಸಚಿವ ಹಾಗೂ ಸಂಸದ ಪ್ರಹ್ಲಾದ ಜೋಶಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ.ಈ ವಿಷಯವಾಗಿ ವರಿಷ್ಠರು ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿರಲಿ ಅವುಗಳಿಗೆ ಬದ್ಧವಾಗಿರುತ್ತೇನೆ ಎಂದರು.
ಯಾರೂ ಅನಿವಾರ್ಯವಲ್ಲ: ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಬಿಜೆಪಿ ಸದೃಢವಾಗಿದೆ. ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ಬೇಸರವಾದ ಕುರಿತು ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದು ತಿಳಿಸಿದ್ದರು.