ಶಿಥಿಲಾವಸ್ಥೆಗೆ ಪಾವಿನಕುರ್ವಾ ತೂಗು ಸೇತುವೆ

KannadaprabhaNewsNetwork |  
Published : Jul 18, 2025, 12:45 AM IST
ಸ ಸ | Kannada Prabha

ಸಾರಾಂಶ

ಕರ್ಕಿ ಗ್ರಾಪಂ ವ್ಯಾಪ್ತಿಯ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಪಂ ವ್ಯಾಪ್ತಿಯ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.ಜನರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಇದೆ. ಮಳೆಗಾಲವಾದ್ದರಿಂದ ಈ ಸೇತುವೆಯ ಮೇಲೆ ಓಡಾಡುವುದು ತೀರಾ ಕಷ್ಟದಾಯವಾಗಿದೆ. ಜೋರು ಗಾಳಿ-ಮಳೆ ಬಂದರೆ ಸೇತುವೆ ಆ ಕ್ಷಣಕ್ಕೆ ಕುಸಿದು ಬೀಳುತ್ತದೆಯೋ ಎಂಬ ಭಯ ಮೂಡುತ್ತಿದೆ.ಪಾವಿನಕುರ್ವಾ ತೂಗು ಸೇತುವೆಯು ಅಲ್ಲಿನ ಜನರ ಬದುಕಿಗೆ ಅಗತ್ಯ ಮತ್ತು ಅವಲಂಬಿತವಾಗಿದೆ. ಮೀನುಗಾರರು, ಶಾಲಾ ಮಕ್ಕಳು, ಸಾರ್ವಜನಿಕರು ದೋಣಿಯನ್ನು ದಾಟಿ ಕರ್ಕಿ ಗ್ರಾಪಂ ಮುಖಾಂತರ ಹೊನ್ನಾವರಕ್ಕೆ ಬರಬೇಕು. ಸೇತುವೆಯನ್ನು ದಾಟದೇ ಹೊನ್ನಾವರಕ್ಕೆ ಬರಬೇಕು ಎಂದಾದರೆ ೧೨ ರಿಂದ ೧೪ ಕಿ.ಮೀ. ಕ್ರಮಿಸಬೇಕಾಗುತ್ತದೆ. ತೂಗು ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಎಂಜಿನಿಯರ್ ಕಳೆದ ವರ್ಷವೇ ಹೇಳಿದ್ದಾರೆ. ಹೀಗಿದ್ದೂ ತೂಗುಸೇತುವೆಯನ್ನು ನಿರ್ಮಿಸುವ ಗೋಜಿಗೆ ಆಡಳಿತ ವರ್ಗ ಮನಸ್ಸು ಮಾಡದೇ ಇರುವುದು ದುರಂತವೇ ಸರಿ.

ಮನವಿ ಸಲ್ಲಿಕೆ:ಈ ಹಿನ್ನೆಲೆಯಲ್ಲಿ ಕರ್ಕಿ ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ನಾಲ್ಕೈದು ತಿಂಗಳ ಹಿಂದೆ ಮುರ್ಡೆಶ್ವರದಲ್ಲಿ ನಡೆದ ಉಸ್ತುವಾರಿ ಸಚಿವರ ಜನಸ್ಪಂದನಾ ಸಭೆಯಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಅವರಿಗೆ ಸೇತುವೆ ನಿರ್ಮಿಸಿಕೊಡುವಂತೆ ಊರಿನ ಪ್ರಮುಖರು, ಪಂಚಾಯತ್ ಸದಸ್ಯರು ಸೇರಿ ಮನವಿ ಸಲ್ಲಿಸಿದರು.

ಸೇತುವೆ ಬೀಳುವ ಹಂತದಲ್ಲಿದೆ ಎಂಬುದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದು ಸಚಿವರ ಎದುರು ಸಾರ್ವಜನಿಕರು ಅಳಲು ತೋಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯರು, ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.ಕಡಲ್ಕೊರೆತ ಜೋರು:

ಪಾವಿನಕುರ್ವಾದಲ್ಲಿ ಸಮುದ್ರ ತೀರವಿದೆ. ಮಳೆಗಾಲದಲ್ಲಿ ಸಮುದ್ರದ ಕಡಲ್ಕೊರೆತ ಜೋರಾಗಿ ಇರುತ್ತದೆ. ಮಳೆ ಜೋರಾಗಿ ಒಂದೇ ಸಮನೆ ಬಿದ್ದರೆ, ಅತ್ತ ಶರಾವತಿ ನೀರಿನ ಅಬ್ಬರವೂ ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗಿ ಜನರು ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿಯೂ ಇದೆ. ಇದೀಗ ಮಳೆ ಬೀಳುತ್ತಿರುವುದರಿಂದ ಕಡಲ್ಕೊರೆತ ಉಂಟಾಗುತ್ತಿದೆ. ಸಮುದ್ರದ ಅಂಚಿಗೆ ಹಾಕಿದ ಶಿಲೆಕಲ್ಲುಗಳು ಮೇಲೆ ಬಂದಿದ್ದು, ಓಡಾಡಲು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ರಸ್ತೆಗಳು ಸಮುದ್ರದ ಅಲೆಯ ಅಬ್ಬರಕ್ಕೆ ಕೊಚ್ಚಿಹೋಗಿವೆ.ಸೇತುವೆಯೂ ಸರಿಯಿಲ್ಲದಿರುವುದು ಹಾಗೂ ಕಡಲ್ಕೋರೆತವೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದು ಅಲ್ಲಿನ ಜನರು ಭಯದಲ್ಲಿಯೇ ಕಾಲವನ್ನು ಕಳೆಯುವಂತಾಗಿದೆ.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ