ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ತೂಬಿನಕೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೆರೆ-ಕಟ್ಟೆಗಳಿಗೆ ಲೋಕಪಾವನಿ ನದಿಯಿಂದ ನೀರು ತುಂಬಿಸಲು ಅನುವು ಮಾಡಿಕೊಟ್ಟ ನೆನಪಿಗಾಗಿ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಾವು ಸಾರ್ವಜನಿಕ ಜೀವನಕ್ಕೆ ಬರುವಂತೆ ಯಾರೂ ಆಹ್ವಾನ ಕೊಟ್ಟಿಲ್ಲ. ಸ್ವಯಂ ಪ್ರೇರಿತವಾಗಿ ಬಂದಿದ್ದೇವೆ. ಜನರು ನಮ್ಮನ್ನು ಗುರುತಿಸಿ ಆಯ್ಕೆ ಮಾಡಿ ಗೌರವದ ಸ್ಥಾನ ನೀಡಿದ್ದಾರೆ. ಆ ಸ್ಥಾನದಿಂದ ನಮಗೆ ಜವಾಬ್ದಾರಿ ಹೆಚ್ಚಿದೆ. ಬದ್ಧತೆಯಿಂದ ಜನಪರ ಕೆಲಸ ಮಾಡುವುದು ನಮ್ಮ ಕರ್ತವ್ಯ. ಹಣ, ಅಧಿಕಾರವಷ್ಟೇ ರಾಜಕಾರಣಿಗಳ ಗುರಿಯಾಗಬಾರದು. ಅಧಿಕಾರದಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರ ಬಳಿಗೆ ಹೋಗಿ ರಾಜಕಾರಣ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಗುರಿಯಾಗಿಸಿಕೊಳ್ಳಬೇಕು. ಆಗ ಜನಮನ್ನಣೆಗೆ ಪಾತ್ರರಾಗುತ್ತೀರಿ ಎನ್ನುವುದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದರು.ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಕೆಆರ್‌ಎಸ್‌ನ +೭೦ ಮತ್ತು +೭೫ರ ಗೇಟ್‌ಗಳು ಶಿಥಿಲಗೊಂಡು ನೀರು ಹೊರಗೆ ಹರಿದುಹೋಗುತ್ತಿತ್ತು. ಏನಾದರೂ ಮಾಡಿ ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆಯಲೇಬೇಕೆಂದು ಪಣತೊಟ್ಟು ಗೇಟ್‌ಗಳನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. ಅದರಂತೆ ೩೫ಕ್ಕೂ ಹೆಚ್ಚು ಗೇಟ್‌ಗಳು ಬದಲಾವಣೆಯಾಗಿದ್ದರಿಂದ ಈಗ ಒಂದು ಹನಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿಲ್ಲ ಎಂದರು.
ಜನಪರವಾಗಿರುವ ಒಂದೊಂದು ಯೋಜನೆಗಳನ್ನು ಜಾರಿ ಮಾಡುವಾಗ ಸಾಕಷ್ಟು ಅಡಚಣೆಗಳು ಎದುರಾಗುತ್ತವೆ. ಆ ಸಮಯದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಜನರಿಗೆ ಒಳ್ಳೆಯದಾಗುವ ಕೆಲಸವನ್ನು ಮಾಡಿದಾಗ ಯಾವುದೇ ಕಾನೂನು ಅಡಚಣೆಗಳೂ ಎದುರಾಗುವುದಿಲ್ಲ. ಆದರೆ, ಅಧಿಕಾರಿಗಳ ಮಾತು ಕೇಳಿದರೆ ಎಂದಿಗೂ ಉದ್ಧಾರವಾಗುವುದಿಲ್ಲ. ಅಧಿಕಾರಿಗಳ ಮನಸ್ಥಿತಿಯನ್ನು ಮೀರಿ ಯೋಚನೆ ಮಾಡುವ ಮನಸ್ಥಿತಿಯನ್ನು ನಾವು ಹೊಂದಿರಬೇಕು ಎಂದರು.
ಮಂಡ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲಿ ನಕ್ಷೆಯೊಂದನ್ನು ತಯಾರು ಮಾಡಿ. ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಬೆಂಬಲ ನೀಡಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಮುನ್ನಡೆಸೋಣ ಎಂದು ಸಲಹೆ ನೀಡಿದರು.
ಸಮಾರಂಭಕ್ಕೂ ಮುನ್ನ ಸುತ್ತೂರು ಶ್ರೀಗಳು ಮತ್ತು ಚುಂಚಶ್ರೀ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಎಲೆಚಾಕನಹಳ್ಳಿ ಕೆರೆಗೆ ಬಾಗೀನ ಸಮರ್ಪಿಸಿದರು. ನಂತರ ಗಣ್ಯರನ್ನು ಜಾನಪದ ಕಲಾತಂಡಗಳು, ಜೋಡೆತ್ತುಗಳು ಹಾಗೂ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.