ಬಂಟ್ವಾಳ: ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಇಲ್ಲಿನ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಸುಮಾರು 8 ಕುಟುಂಬಗಳಿಗೆ ನೀರು ನುಗ್ಗಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ನಿರ್ದೇಶನದಂತೆ ಎಲ್ಲ ಕುಟುಂಬಗಳನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ನದಿಯಲ್ಲಿ ಕಸದ ರಾಶಿಯಿಂದ ರಕ್ಷಣಾ ಕಾರ್ಯಕ್ಕೆ ಕೊಂಚ ಮಟ್ಟಿಗೆ ತೊಂದರೆಯಾಗಿತ್ತು.ಮೆಸ್ಕಾಂ ವಿದ್ಯುತ್ ತಂತಿಗಳು ಕೂಡ ಇಲ್ಲಿ ಇದ್ದ ಕಾರಣಕ್ಕೆ ಕರೆಂಟ್ ಕಡಿತಗೊಳಿಸಿದ ಬಳಿಕ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಎಲ್ಲ ಕುಟುಂಬಗಳಿಗೆ ಪೊಳಲಿ ಸರ್ವಮಂಗಲ ಸಭಾಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ. ಸ್ಥಳದಲ್ಲಿ ತಹಸೀಲ್ದಾರ್ ಮೊಕ್ಕಾಂ ಹೂಡಿದ್ದಾರೆ.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ರಾಧ, ಸದಸ್ಯರಾದ ಕಾರ್ತಿಕ್ ಬಲ್ಲಾಳ್, ಚಂದ್ರಹಾಸ ಪಲ್ಲಿಪಾಡಿ, ಭಾಗೀರಥಿ, ರವೀಂದ್ರ ಸುವರ್ಣ, ಲಕ್ಮೀಶ್ ಶೆಟ್ಟಿ, ಲೋಕೇಶ್ ಭರಣಿ, ಕಂದಾಯ ನಿರೀಕ್ಷಕ ವಿಜಯ್ ಪಿಡಿಒಗಳಾದ ಮಾಲಿನಿ,ನಯನ,ಪ್ರಮುಖರಾದ ವೆಂಕಟೇಶ ನಾವಡ, ಯಶವಂತ ಪೊಳಲಿ ಸಹಿತ ಅನೇಕರ ತಂಡ ರಕ್ಷಣಾ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಮೂಲ್ಕಿಯಲ್ಲಿ ರಸ್ತೆ ಸಂಪರ್ಕ ಕಡಿತಮೂಲ್ಕಿ: ಭಾರೀ ಮಳೆಗೆ ಏಳಿಂಜೆ ಪಟ್ಟೆ ಕ್ರಾಸ್ ಬಳಿ ಸಂಕಲಕರಿಯ- ಉಗ್ಗೆದಬೆಟ್ಟು ಸಂಪರ್ಕ ಕಡಿತವಾಗಿದೆ. ಪಟ್ಟೆ-ಏಳಿಂಜೆ ಸಂಪರ್ಕ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಭಾರೀ ಮಳೆಗೆ ಪಟ್ಟೆ ಕ್ರಾಸ್ ಬಳಿ ಅಂಗಡಿಯ ಬಾಡಿಗೆ ಕೋಣೆಯಲ್ಲಿ ಮಲಗಿದ್ದ ಶಿವಮೊಗ್ಗ ಮೂಲದ ಟ್ರ್ಯಾಕ್ಟರ್ ಚಾಲಕ ಮಾಲತೇಶ್ ಅವರ ಬಾಡಿಗೆ ಕೋಣೆಯೊಳಗೆ ನೆರೆ ನೀರು ನುಗ್ಗಿ ದಿನಸಿ ಸಾಮಾನು, ಬಟ್ಟೆ ಬರೆಗಳೆಲ್ಲ ನೀರು ಪಾಲಾಗಿವೆ.ನೆರೆ ನೀರಿಗೆ ಹಲವಾರು ಅಂಗಡಿಗಳ ಒಳಭಾಗದಲ್ಲಿ ನೀರು ತುಂಬಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಪಟ್ಟೆ ಕ್ರಾಸ್ ನಂದೀಶ್ ಕೋಳಿ ಅಂಗಡಿ ಮುಳುಗಡೆಯಾಗಿ ಕೋಳಿಗಳು ಸಾವಿಗೀಡಾದವು.
ಮುಂಡ್ಕೂರು ಗ್ರಾಮ ಪಂಚಾಯಯಿತಿಸದಸ್ಯ ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಅವರ ಮನೆ, ಹಟ್ಟಿ ಜಲಾವೃತಗೊಂಡಿವೆ. ಮುಂಡ್ಕೂರು ದೊಡ್ಡಮನೆಯ ಕಲ್ಲಾಡಿ ನಾಗಬನ ಮುಳುಗಡೆಯಾಗಿದೆ.