ಭೂಮಿ ಸ್ವಾಧೀನಪಡಿಸಿಕೊಳ್ಳದೇ ಪೈಪ್‌ ಅಳವಡಿಸಬಹುದು: ಹೈಕೋರ್ಟ್

KannadaprabhaNewsNetwork |  
Published : Jun 11, 2026, 02:45 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಖಾಸಗಿ ವ್ಯಕ್ತಿಗಳ ಜಮೀನು ಸ್ವಾಧೀನಪಡಿಸಿಕೊಳ್ಳದೆ ಮತ್ತು ಯಾವುದೇ ಪರಿಹಾರ ನೀಡದೆ ಒಳಚರಂಡಿ ಪೈಪ್​ಲೈನ್ ಅಳವಡಿಸಲು ಬೆಂಗಳೂರು ಜಲಮಂಡಳಿಗೆ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ವ್ಯಕ್ತಿಗಳ ಜಮೀನು ಸ್ವಾಧೀನಪಡಿಸಿಕೊಳ್ಳದೆ ಮತ್ತು ಯಾವುದೇ ಪರಿಹಾರ ನೀಡದೆ ಒಳಚರಂಡಿ ಪೈಪ್​ಲೈನ್ ಅಳವಡಿಸಲು ಬೆಂಗಳೂರು ಜಲಮಂಡಳಿಗೆ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮ ಜಮೀನಿನಲ್ಲಿ ಜಲಮಂಡಳಿ ಪೈಪ್​ಲೈನ್ ಅಳವಡಿಸುವುದನ್ನು ಪ್ರಶ್ನಿಸಿ ಬೆಂಗಳೂರು ಉತ್ತರ ತಾಲೂಕಿನ ಹೆಣ್ಣೂರು ಹಾಗೂ ನಾಗವಸರ ಗ್ರಾಮದ ನಿವಾಸಿಗಳಾದ ಟಿ.ಎನ್.ಚಂದ್ರಶೇಖರ ಗೌಡ, 80 ವರ್ಷದ ಜೆಥ್ರೋನಿಕಾ ಹಾಗೂ ಇನ್ನಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ನೀಡಿದೆ.

ಬೆಂಗಳೂರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಜಲಮಂಡಳಿ) ಕಾಯ್ದೆಯ ಸೆಕ್ಷನ್ 77ರ ಪ್ರಕಾರ, ಜಮೀನಿನ ಮಾಲೀಕತ್ವ ಮೂಲ ಮಾಲೀಕರ ಬಳಿಯೇ ಇರುತ್ತದೆ. ಜಲಮಂಡಳಿಯು ಕೇವಲ ಪೈಪ್​ಲೈನ್​ ಹಾಕಲು ಮತ್ತು ಅದನ್ನು ನಿರ್ವಹಿಸಲು ಬಳಕೆಯ ಹಕ್ಕನ್ನು ಮಾತ್ರ ಹೊಂದಿರುತ್ತದೆ. ಆದ್ದರಿಂದ ಪ್ರತಿ ಬಾರಿ ಪೈಪ್ ಹಾಕುವಾಗಲೂ ಕಡ್ಡಾಯವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗಿಲ್ಲ ಎಂದು ತಿಳಿಸಿದೆ.

ಕಾಮಗಾರಿ ನಡೆಸುವಾಗ ಖಾಸಗಿ ಜಮೀನಿಗೆ ಕನಿಷ್ಠ ಪ್ರಮಾಣದ ಹಾನಿ ಮಾಡಬೇಕು. ಒಂದು ವೇಳೆ ಜಮೀನಿನ ಅಥವಾ ಬೆಳೆಗೆ ಯಾವುದೇ ಭೌತಿಕ ನಷ್ಟ ಉಂಟಾಗಿದ್ದರೆ, ಅದಕ್ಕೆ ಕಾಯ್ದೆಯ ನಿಯಮಗಳ ಪ್ರಕಾರ ಪೂರ್ಣ ನಷ್ಟ ಪರಿಹಾರವನ್ನು ಜಲಮಂಡಳಿ ಪಾವತಿಸಬೇಕು. ಆದರೆ, ಈ ಪರಿಹಾರದ ಹಣ ಪಾವತಿಯು ಕಾಮಗಾರಿ ಆರಂಭಿಸಲು ಪೂರ್ವ ಷರತ್ತಲ್ಲ ಎಂದು ಪೀಠ ಹೇಳಿದೆ.

ಬೆಂಗಳೂರಿನಂತಹ ಬೃಹತ್ ಮಹಾನಗರದ ನಾಗರಿಕ ಜೀವನವು ಜಲಮಂಡಳಿಯ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಗರದ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ನಗರದ ನೈರ್ಮಲ್ಯದ ದೃಷ್ಟಿಯಿಂದ ಜಲಮಂಡಳಿಗೆ ಇಂತಹ ವಿಶೇಷ ಅಧಿಕಾರ ಇರುವುದು ಅನಿವಾರ್ಯ.ಪ್ರತಿ ಬಾರಿ ಪೈಪ್ ಹಾದುಹೋಗುವಾಗಲೂ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕೆಂದರೆ ನಗರದ ಇಡೀ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳು ಆಡಳಿತಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸ್ಥಗಿತಗೊಳ್ಳುತ್ತವೆ ಎಂದು ಪೀಠ ತಿಳಿಸಿದೆ.

ಪ್ರಕರಣದ ವಿವರ:

ಅರ್ಜಿದಾರರ ಜಮೀನಿನ ಒಂದು‌ ಭಾಗದಲ್ಲಿ ಒಳಚರಂಡಿ ಪೈಪ್​ಲೈನ್​ಗಳನ್ನು ಅಳವಡಿಸಲು ಜಲಮಂಡಳಿ ಮುಂದಾಗಿತ್ತು. ಇದಕ್ಕೆ ಅರ್ಜಿದಾರರು ಆಕ್ಷೇಪಿಸಿದಾಗ ಜಲಮಂಡಳಿ ಅಧಿಕಾರಿಗಳು ಪೊಲೀಸರಿಗೆ ದೂರು ದಾಖಲಿಸಿದ್ದರು.

ಇದರಿಂದ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಕಾನೂನು ಬಾಹಿರವಾಗಿ ತಮ್ಮ ಜಮೀನಿಗೆ ಪ್ರವೇಶಿಸಲಾಗಿದೆ. ಜಮೀನಿನ ಮಾಲೀಕರಾದ ತಮ್ಮ ಅನುಮತಿ ಪಡೆಯದೇ ಜಲಮಂಡಳಿ ಅಧಿಕಾರಿಗಳು 5 ರಿಂದ 8 ಅಡಿ ಉದ್ದದ ಬೃಹತ್ ಒಳಚರಂಡಿ ಪೈಪ್​ಲೈನ್​ಗಳನ್ನು ಅಳವಡಿಸಲು ಮುಂದಾಗಿದ್ದಾರೆ. ತಮ್ಮ ಜಮೀನನ್ನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳದೆ ಮತ್ತು ಯಾವುದೇ ಮಾರುಕಟ್ಟೆ ದರದ ಪರಿಹಾರ ನೀಡದೇ ಪೈಪ್​ಲೈನ್ ಹಾಕಲಾಗುತ್ತಿದೆ. ಆದ್ದರಿಂದ ತಕ್ಷಣ ಪೈಪ್​ಲೈನ್ ತೆರವುಗೊಳಿಸಬೇಕು. ಜಮೀನು ಬಳಕೆ ಮಾಡಿದ್ದಕ್ಕಾಗಿ ಪರಿಹಾರ ನೀಡಲು ಜಲಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನ ಕಂಡರೆ ವಿರೋಧ ಪಕ್ಷಕ್ಕೆ ಅಸೂಯೆ: ಡಿಕೆಶಿ ಆರೋಪ
ಸುಧೀರ್ಘ ಪ್ರಧಾನಿ ದಾಖಲೆ: ಬಿಜೆಪಿ ಸಂಭ್ರಮ