ಇಳಕಲ್ಲದಲ್ಲಿ ಶಾಂತಿ ಕದಡುವ ಹುನ್ನಾರ: ದೊಡ್ಡನಗೌಡ ಆರೋಪ

KannadaprabhaNewsNetwork |  
Published : Oct 28, 2026, 02:45 AM IST
 ೨೭ ಇಳಕಲ್ಲ ೧ | Kannada Prabha

ಸಾರಾಂಶ

ಇಳಕಲ್ಲ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕ್‌ ವುಲ್ಲಾ ಖಾನ್ ಜಯಂತಿ ಕಾರ‍್ಯಕ್ರಮ ಹಮ್ಮಿಕೊಂಡು ಭಾಗವಹಿಸಿದ್ದವರು ಇವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಎಲ್ಲರೂ ಆರ್‌ಎಸ್ಎಸ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ವಿರುದ್ಧ ಕೀಳಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆ ಕದಡುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ್‌ ಕುಮ್ಮಕ್ಕು ನೀಡಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕ್‌ ವುಲ್ಲಾ ಖಾನ್ ಜಯಂತಿ ಕಾರ‍್ಯಕ್ರಮ ಹಮ್ಮಿಕೊಂಡು ಭಾಗವಹಿಸಿದ್ದವರು ಇವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಎಲ್ಲರೂ ಆರ್‌ಎಸ್ಎಸ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ವಿರುದ್ಧ ಕೀಳಾಗಿ ಮಾತನಾಡುವ ಮೂಲಕ ಕೋಮು ಸೌಹಾರ್ದತೆ ಕದಡುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ್‌ ಕುಮ್ಮಕ್ಕು ನೀಡಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.22ರಂದು ಇಳಕಲ್ಲ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಗಣವೇಷಧಾರಿಗಳ ಪಥಸಂಚಲನ ಹಾಗೂ ಸಮಾರೋಪ ಸಮಾರಂಭ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಸಂಘಟಿತವಾಗಿ ನಡೆಯಿತು. ಆದರೆ, ಅದೇ ದಿನ ಉದ್ದೇಶಪೂರ್ವಕವಾಗಿ ಅಶ್ಫಾಕ್‌ ಉಲ್ಲಾ ಖಾನ್ ಜಯಂತಿ ಕಾರ‍್ಯಕ್ರಮ ಹಮ್ಮಿಕೊಳ್ಳಲಾಯಿತು. ಅವಾಚ್ಯ ಶಬ್ಧ ಬಳಸಬಾರದು ಮತ್ತು ಪ್ರಚೋದನಕಾರಿ ಭಾಷಣ ಮಾಡಬಾರದು ಎಂದು ಪೊಲೀಸರು ಮೊದಲೇ ನೋಟಿಸ್ ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ದ್ವೇಷದ ವಿಷಬೀಜ ಬಿತ್ತಲಾಗಿದೆ. ಶಾಂತಿ ಕದಡುವ ಭಾಷಣ ಮಾಡಿದ ಎಸ್.ಎಸ್. ಖಾದ್ರಿ, ನಜ್ಮಾ ನಜೀರ್, ಅಬ್ದುಲ್‌ ರಜಾಕ್ ತಟಗಾರ ಮತ್ತು ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಬೇಕು. ತಪ್ಪಿದ್ದಲ್ಲಿ ಬಿಜೆಪಿ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಗರದ ರಸ್ತೆಗಳು, ಹೊಸ ಬೈಪಾಸ್ ರಸ್ತೆಗಳು ಮತ್ತು ಹೊಲ-ಗದ್ದೆಗಳ ತೋಟಗಳಲ್ಲಿ ಇಸ್ಪೀಟ್ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ ಇದಕ್ಕೆ ಪೊಲೀಸರ ಪರೋಕ್ಷ ಕುಮ್ಮಕ್ಕಿದೆ ಎಂದು ಆರೋಪಿಸಿದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಸೀಲ್ ಹೊಂದಿದ್ದ ಸುಮಾರು ೩೫ ಟನ್ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದೆ. ಬಡವರ ಅಕ್ಕಿ ಲೂಟಿ ಮಾಡುತ್ತಿರುವವರಿಗೆ ಯಾರು ರಕ್ಷಣೆ ನೀಡುತ್ತಿದ್ದಾರೆ ಎಂದು ಉತ್ತರಿಸಬೇಕು. ಹಳ್ಳ-ಕೊಳ್ಳಗಳಲ್ಲಿ ಒಂದು ಹನಿ ನೀರಿಲ್ಲದ ಬರಗಾಲದ ಸ್ಥಿತಿಯಲ್ಲೂ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಟೀಕಿಸಿದರು.

ಬೆಂಗಳೂರು ಸೇರಿದಂತೆ ಹೊರಗಿನಿಂದ ಮಹಿಳೆಯರನ್ನು ಕರೆತಂದು ತಿಂಗಳುಗಟ್ಟಲೆ ಇರಿಸಿಕೊಂಡು ಶ್ರೀಮಂತರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ದಂಧೆ ಇಳಕಲ್‌ನಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದು, ಸಂತ್ರಸ್ತರು ಪೊಲೀಸರಿಗೆ ದೂರು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು

ನಗರದಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಸಾರ್ವಜನಿಕರಿಗೆ ವಾರ-ಹತ್ತು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಕೂಡಲೇ ಸಮರ್ಪಕ ಕುಡಿಯುವ ನೀರು ಪೂರೈಸದಿದ್ದರೆ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಹೋದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂತೋಷ ಐಲಿ, ಮಂಜುನಾಥ ಹೊಸಮನಿ, ಮಹದೇವಸಾ ಕಾಟವಾ, ರಾಜೇಂದ್ರ ಆರಿ., ಗೋವಿಂದ ಕರವಾ, ಮನ್ನಾಪುರ, ಬಸವರಾಜ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು ಸುಗುರೇಶ ನಾಗಲೋಟಿ ಸ್ವಾಗತಿಸಿದರು, ಚಂದ್ರಶೆಖರ ಏಕಬೋಟೆ ವಂದಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಸ್ಮೃತಿ: 200 ಸಸಿ ನೆಟ್ಟು ಗುರುಗಳಿಗೆ ಗೌರವ ಸಲ್ಲಿಸಿದ 2008ರ ಬ್ಯಾಚ್
ರೈತರ ಶ್ರಮಕ್ಕೆ ಬೆಲೆ ನೀಡದ ಸರ್ಕಾರಗಳು