ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಕರಕುಶಲಕರ್ಮಿಗಳಿಗಾಗಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರುವ ಮೂಲಕ ಸ್ವಉದ್ಯೋಗಿಗಳಿಗೆ ಆರ್ಥಿಕ ಬಲ ತುಂಬುವ ಕಾರ್ಯ ಮಾಡಿದ್ದು, ವಿಶ್ವಕರ್ಮ ಸಮಾಜದ ಬಡಗಿತನ, ಕಮ್ಮಾರಿಕೆ, ಶಿಲ್ಪ, ಚಿನ್ನದ ಕೆಲಸ ಮಾಡುವ ಕುಶಲಕರ್ಮಿಗಳು ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ವಿಶ್ವಕರ್ಮರು ಕಲಾ ವಂಶಜರಾಗಿದ್ದು, ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನೌಕರರ ಸಂಘಟನೆ ಮೂಲಕ ವಿವಿಧ ಅಂಗ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲಾ ವಿಶ್ವಕರ್ಮ ಸಮಾಜವನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿರುವೆ. ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮುಂದಾಳತ್ವದಲ್ಲಿ ಸಂಘವು ಕೇವಲ 8 ವರ್ಷಗಳಲ್ಲಿ ಅದ್ಭುತ ಕಾರ್ಯಗಳನ್ನು ಮಾಡಿದೆ. ವಿಶ್ವಕರ್ಮ ನೌಕರರ ಸಂಘ ಹಾಗೂ ಅಂಗ ಸಂಘಟನೆಗಳು ಮಾದರಿಯಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿದರು.
ಇಳಕಲ್-ಕೂಡಲಸಂಗಮ ಶ್ರೀಮತ್ ಆನೆಗುಂದಿ ಪಂಚ ಸಿಂಹಾಸನ ಸರಸ್ವತಿ ಪೀಠ, ವಿಶ್ವಕರ್ಮ ಬ್ರಹ್ಮಾಂಡಭೇರಿಮಠದ ಶ್ರೀ ವಿಶ್ವನಾಥ ಸಾಮೀಜಿ, ಶಿರೋಳ ಶ್ರೀಯಚ್ಚರಸ್ವಾಮಿ ಗವಿಮಠದ ಶ್ರೀ ಅಭಿನವ ಯಚ್ಚರ ಸ್ವಾಮಿಗಳು ಹಾಗೂ ಶಿರಗುಪ್ಪ ಕರಸ್ಥಳ ನಾಗಲಿಂಗಸ್ವಾಮಿ ಮಠ ಉಪ್ಪಾರಹಳ್ಳಿಯ ಶ್ರೀ ಸುರೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಂಘದ ಗೌರವ ಅಧ್ಯಕ್ಷ ಎ.ಎನ್. ಬಡಿಗೇರ, ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ. ಬಡಿಗೇರ, ನಿರ್ದೇಶಕರಾದ ಕೆ.ಎಸ್. ಬಡಿಗೇರ, ವಿ.ವಿ. ರಾಜನಾಳ, ಶಂಕರಾಚಾರ್ಯ ಕಂಚಗಾರ, ಮಹೇಶ ಕಮ್ಮಾರ, ಎಸ್.ಎಂ. ಬಡಿಗೇರ, ಕಿರಣ ನಾರಾಯಣಪ್ಪ ವಡ್ಡಟ್ಟಿ, ಸತ್ಯನಾರಾಯಣ ಗುಂಜಾಳ, ಶಿವಲೀಲಾ ಕೆ. ಬಡಿಗೇರ, ರಿಂದಮ್ಮ ನಾರಾಯಣಪ್ಪ ವಡ್ಡಟ್ಟಿ, ವಾಣಿಶ್ರೀ ಕಡ್ಲಿಕೊಪ್ಪ ಉಪಸ್ಥಿತರಿದ್ದರು. ನಿರ್ದೇಶಕ ವಿ.ವಿ. ರಾಜನಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.