ಸೃಷ್ಠಿ ಕಾವ್ಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ
ಕನ್ನಡಪ್ರಭ ವಾರ್ತೆ ಕಾರಟಗಿಜನಸಾಮಾನ್ಯರ ಬದುಕು, ಭಾವಗಳನ್ನು ಅಕ್ಷರ ರೂಪದಲ್ಲಿ ಕಟ್ಟಿದ ಕಾವ್ಯಕ್ಕೆ ಜೀವಂತಿಕೆ ಬರಲು ಸಾಧ್ಯ ಎಂದು ಸಾಹಿತಿ ಟಿ.ಎಸ್. ಗೊರವರ ಹೇಳಿದರು.
ಇಲ್ಲಿನ ವಿದ್ಯಾ ಭಾರತಿ ಮಹಿಳಾ ಮಹಾವಿದ್ಯಾಲಯದಲ್ಲಿ ಸೃಷ್ಠಿ ಪ್ರಕಾಶನ ಆಯೋಜಿಸಿದ್ದ ಸೃಷ್ಠಿ ಕಾವ್ಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನುಷ್ಯನ ನಿತ್ಯದ ನೋವು ನಲಿವಿನಲ್ಲಿನ ಸೂಕ್ಷ್ಮ ಸಂವೇದನೆಯನ್ನು ಉತ್ತಮ ಮತ್ತು ಮಿತ ಭಾಷೆಯ ಮೂಲಕ ಅಭಿವ್ಯಕ್ತಪಡಿಸುವ ಕಲೆಯೇ ಕಾವ್ಯ. ಪ್ರತಿಯೊಬ್ಬ ಕವಿ ರಚಿಸುವ ಕಾವ್ಯದಲ್ಲಿ ಸಮಾಜದ ಪರವಾದ ಆಲೋಚನೆಗಳನ್ನು ಹೊಂದಿರಬೇಕು. ಸಾಮಾನ್ಯ ಜನರ ಕಷ್ಟ, ಸುಖಗಳನ್ನು ದಾಖಲಿಸಿದರೆ ಮಾತ್ರ ನಿಮ್ಯ ಕಾವ್ಯಕ್ಕೆ ಬೆಲೆ. ಕಾವ್ಯವು ನಮ್ಮ ಜನರನ್ನು ದಿನನಿತ್ಯ ಕಾಡಿಸುತ್ತಿರುವ ಜ್ವಲಂತ ಪ್ರಶ್ನೆಗಳ ಬಗ್ಗೆ ಚಿಂತಿಸುವುದಿಲ್ಲವಾದರೆ, ಅವರನ್ನು ಪೀಡಿಸುತ್ತಿರುವ ಸಮಸ್ಯೆಗಳ ಬಗ್ಗೆ, ಸಮಕಾಲೀನ ಬಿಕ್ಕಟ್ಟುಗಳ ಬಗ್ಗೆ ಅಭಿವ್ಯಕ್ತಿಯನ್ನು ಹೊರ ಹೊಮ್ಮಿಸದಿದ್ದರೆ ನಿಮ್ಮ ಕಾವ್ಯ ತನ್ನ ಅಂತಸತ್ವವನ್ನೇ ಕಳೆದುಕೊಂಡಂತೆ ಎಂದರು.
ಈ ಕಾಲ ಘಟ್ಟದಲ್ಲಿ ಕಾವ್ಯ ಕಟ್ಟುತ್ತಿರುವ, ಹೊಸ ಕಥನದ ಮಾದರಿಗಳನ್ನು ಹುಡುಕುತ್ತಿರುವ ಕೆಲವೇ ಕೆಲವು ಯುವ ಬರಹಗಾರರಲ್ಲಿ ಸುಮಿತ್ ಮೇತ್ರಿ ಒಬ್ಬರು. ನಿರ್ಭೀತವಾಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಇರುವ ಅವರ ಕವಿತೆಗಳು ಕನ್ನಡದ ಸಹೃದಯರ, ಕಾವ್ಯಾಸಕ್ತರ ಗಮನ ಸೆಳೆದಿವೆ. ಅವರ ಈ ಕಣ್ಣುಗಳಿಗೆ ಸದಾ ನೀರಡಿಕೆ ಎನ್ನುವ ಕೃತಿಗೆ ಈ ಸಾಲಿನ ಸೃಷ್ಠಿ ಕಾವ್ಯ ಪುರಸ್ಕಾರ ನೀಡಿ ಗೌರವಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.ಕವಿ ಸುಮಿತ್ ಮೇತ್ರಿ ಮಾತನಾಡಿ, ಬದುಕಿನ ಸೌಂದರ್ಯ ಮತ್ತು ಕುರುಪಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಶಕ್ತಿ ಇರುವುದರಿಂದಲೇ ಅನಿಸಿದ್ದನ್ನು ಆಡಬಲ್ಲೆ, ಆಡಿದ್ದನ್ನು ಬರೆಯಬಲ್ಲೆ ಎಂಬ ಛಲ ನನ್ನದು. ನಾನು ಕವಿಯಾಗಿರುವುದರಿಂದಲೇ ಹೆಚ್ಚು ಲವಲವಿಕೆಯಿಂದ ಬದುಕಿದ್ದೇನೆ. ಹೀಗಾಗಿ ಕಾವ್ಯ ನನ್ನ ಉಸಿರಾಗಿದೆ ಎಂದರು.
ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಕವಿಗಳಾದ ಮೈಲಾರಪ್ಪ ಬೂದಿಹಾಳ ಮತ್ತು ಮಾನಸ, ಸೃಷ್ಠಿ ಪ್ರಕಾಶನದ ಅಧ್ಯಕ್ಷೆ ಮಂಗಲಾ ಟೆಂಕಪ್ಪನವರ್ ಮಾತನಾಡಿದರು.ವಿಜಯಪುರ ಜಿಲ್ಲೆಯ ಹಲಸಂಗಿಯ ಕವಿ ಸುಮಿತ್ ಮೇತ್ರಿಯವರಿಗೆ ಸೃಷ್ಠಿ ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ₹ಮೂರು ಸಾವಿರ ನಗದು, ಪ್ರಮಾಣ ಪತ್ರ, ಫಲಕ, ಶಾಲು ಒಳಗೊಂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾಭಾರತಿ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಹುಸೇನ್‌ಭಾಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸೃಷ್ಠಿ ಕಾವ್ಯ ಪ್ರಕಾಶನದ ಸಂಚಾಲಕ ಅಶೋಕ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಶಸ್ತಿ ವಿಜೇತ ಕೃತಿಯ ಕುರಿತು ಕವಿ ಮೌನೇಶ ನವಲಳ್ಳಿ, ಕವಿ ಸುಮಿತ್ ಮೇತ್ರಿ ಬದುಕು ಬರಹ ಕುರಿತು ಶಿಕ್ಷಕ ಗಂಗಾಧರ್ ಪೂಜಾರ ಮಾತನಾಡಿದರು. ಎನ್.ಮಾರುತಿ, ವಿಶ್ವಜಿತ್ ಸಿಂಧೆ ಮತ್ತು ಜಗದೀಶ್ ಈಡಿಗ ಕಾರ್ಯಕ್ರಮ ನಿರ್ವಹಿಸಿದರು.