ಕಾಲ್ತುಳಿತಕ್ಕೆ ಪೊಲೀಸ್‌ ಬಾಡಿ ಕ್ಯಾಮೆರಾಗಳೂ ಸಾಕ್ಷಿ!

KannadaprabhaNewsNetwork |  
Published : Jun 12, 2025, 04:10 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಭದ್ರತಾ ವ್ಯವಸ್ಥೆ ಹಾಗೂ ಲೋಪದ ಬಗ್ಗೆ ಪೊಲೀಸರು ಧರಿಸಿದ್ದ ಬಾಡಿ ವೋರ್ನ್‌ ಕ್ಯಾಮೆರಾಗಳೇ ಪ್ರಮುಖ ಸಾಕ್ಷಿಯಾಗುತ್ತಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಭದ್ರತಾ ವ್ಯವಸ್ಥೆ ಹಾಗೂ ಲೋಪದ ಬಗ್ಗೆ ಪೊಲೀಸರು ಧರಿಸಿದ್ದ ಬಾಡಿ ವೋರ್ನ್‌ ಕ್ಯಾಮೆರಾಗಳೇ ಪ್ರಮುಖ ಸಾಕ್ಷಿಯಾಗುತ್ತಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆ ಹಾಗೂ ಸಂಚಾರ ನಿರ್ವಹಣೆಗೆ ನಿಯೋಜಿತರಾಗಿದ್ದ ಪೊಲೀಸರು ಧರಿಸಿದ್ದ ಬಾಡಿ ವೋರ್ನ್ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ಮುಂದಾಗಿದೆ. ಅಲ್ಲದೆ ಭದ್ರತಾ ವ್ಯವಸ್ಥೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ವೇಳೆಯೂ ಬಾಡಿ ಕ್ಯಾಮೆರಾ ಕುರಿತು ಪೊಲೀಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಸಂಚಾರ ನಿರ್ವಹಣೆಗೆ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌, ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಹಾಗೂ ಇನ್ಸ್‌ಪೆಕ್ಟರ್‌ಗಳು, ಅದೇ ರೀತಿ ಭದ್ರತಾ ವ್ಯವಸ್ಥೆ ನಿರ್ವಹಿಸುವ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯ ಇನ್ಸ್‌ಪೆಕ್ಟರ್‌ಗಳು ಹಾಗೂ ಹೊಯ್ಸಳ ಗಸ್ತು ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಇಲಾಖೆ ವಿತರಿಸಿದೆ.

ಐಪಿಎಲ್ ಟ್ರೋಫಿ ವಿಜೇತ ಬೆಂಗಳೂರು ರಾಯಲ್‌ ಚಾಲೆಂಜರ್ಸ್ ತಂಡಕ್ಕೆ ಅಭಿನಂದಿಸಲು ಜೂ.4 ರಂದು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಈ ಸಮಾರಂಭಕ್ಕೆ ಬಂದೋಬಸ್ತ್ ಹಾಗೂ ಸಂಚಾರ ನಿರ್ವಹಣೆಗೆ ನಿಯೋಜಿತರಾಗಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸರು ಬಾಡಿ ವೋರ್ನ್‌ ಕ್ಯಾಮೆರಾ ಧರಿಸಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ಘಟನೆಯಲ್ಲಿ ದೊಡ್ಡ ಮಟ್ಟದ ಭದ್ರತಾ ಲೋಪವಾಗಿದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಉನ್ನತ ಮಟ್ಟದಲ್ಲಿರುವವರು ಆರೋಪಿಸಿದ್ದರು. ಆದರೆ ತಾವು ಅನುಮತಿ ನೀಡದೆ ಹೋದರೂ ಆತುರವಾಗಿ ಅಭಿನಂದನಾ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಹಾಗೆಯೇ ತಮಗೆ ಸಿಕ್ಕಿದ ಅಲ್ಪಾವಧಿ ಸಮಯದಲ್ಲೇ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು ಎಂದು ಅಂದಿನ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಸೇರಿ ಪೊಲೀಸರು ಪ್ರತಿಪಾದಿಸಿದ್ದರು. ಆದರೆ ಭದ್ರತಾ ಲೋಪ ಕಾರಣ ನೀಡಿ ಆಯುಕ್ತ ದಯಾನಂದ್ ಸೇರಿದಂತೆ ಐ‍ವರು ಪೊಲೀಸ್ ಅಧಿಕಾರಿಗಳು ಸರ್ಕಾರ ಅಮಾನತು ಮಾಡಿತ್ತು.

ಹೀಗಾಗಿ ಭದ್ರತಾ ವ್ಯವಸ್ಥೆ ಹಾಗೂ ಲೋಪದ ಕುರಿತು ನಿರೂಪಿಸಲು ಬಾಡಿ ವೋರ್ನ್‌ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲು ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

-ಬಾಕ್ಸ್‌-ಬಾಡಿ ವೋರ್ನ್ ಕ್ಯಾಮೆರಾ

ಧರಿಸುತ್ತಿದ್ದ ದಯಾನಂದ್‌

ಬಾಡಿ ವೋರ್ನ್‌ ಕ್ಯಾಮೆರಾವನ್ನು ಖುದ್ದು ಅಂದಿನ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಧರಿಸುತ್ತಿದ್ದರು. ಹೀಗಾಗಿ ಅಂದು ಘಟನೆ ನಡೆದಾಗಲೂ ಅ‍ವರು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ್ದರೇ ಎಂಬುದು ಖಚಿತವಾಗಿಲ್ಲ. ತಮ್ಮ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಉತ್ತೇಜಿಸಲು ದಯಾನಂದ್ ಅ‍ವರು ಎದೆ ಮೇಲೆ ಕ್ಯಾಮೆರಾ ಧರಿಸಿ ಜನರ ಗಮನ ಸೆಳೆದಿದ್ದರು.

ವಾಕಿಟಾಕಿ ಸಂದೇಶ ಸಹ ಸಂಗ್ರಹ ಬಾಡಿ ವೋರ್ನ್ ಕ್ಯಾಮೆರಾಗಳ ದೃಶ್ಯಾವಳಿ ಮಾತ್ರವಲ್ಲದೆ ಅಂದು ಕಾಲ್ತುಳಿತ ಘಟನೆ ನಡೆದಾಗ ಪೊಲೀಸ್ ನಿಯಂತ್ರಣ ಕೊಠಡಿಯಿಂದ ನೀಡಲಾದ ವೈರ್‌ಲೆಸ್‌ ಸಂದೇಶಗಳ ಕುರಿತು ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''