1.20 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಗುರಿ: ಸಿಇಒ

KannadaprabhaNewsNetwork |  
Published : Feb 20, 2024, 01:46 AM IST
-19ಎಸ್‌ಎಂಜಿಕೆಪಿ02:   ಶಿವಮೊಗ್ಗ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಲಸಿಕಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್‌ ಲೋಖಂಡೆ ಮಾತನಾಡಿದರು. | Kannada Prabha

ಸಾರಾಂಶ

ಮಾರ್ಚ್ 3ರಂದು ಜಿಲ್ಲಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ 5 ವರ್ಷದೊಳಗಿನ 1,20,609 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಮಕ್ಕಳು ಪೊಲೀಯೋ ಲಸಿಕೆಯಿಂದ ಕೈ ಬಿಟ್ಟು ಹೋಗದಂತೆ ಮೈಕ್ರೋ ಪ್ಲಾನ್ ಸಿದ್ಧಪಡಿಸಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾರ್ಚ್ 3ರಂದು ಜಿಲ್ಲಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ 5 ವರ್ಷದೊಳಗಿನ 1,20,609 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಲಸಿಕಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಮಕ್ಕಳು ಪೊಲೀಯೋ ಲಸಿಕೆಯಿಂದ ಕೈ ಬಿಟ್ಟು ಹೋಗದಂತೆ ಮೈಕ್ರೋ ಪ್ಲಾನ್ ಸಿದ್ಧಪಡಿಸಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯವಾಗಿ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಡುವ ಕೊಳಚೆ ಪ್ರದೇಶ, ಅಲೆಮಾರಿ ಜನಾಂಗ, ಇಟ್ಟಿಗೆ ಭಟ್ಟಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಪ್ರದೇಶಗಳು, ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಲಸಿಕೆ ನೀಡಬೇಕು. ಸೂಕ್ಷ್ಮ ಪ್ರದೇಶಗಳು, ಪೆರಿ ಅರ್ಬನ್ ಏರಿಯಾಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆಯವರು ಲಸಿಕಾ ದಿನದಂದು ಶಾಲೆಗಳನ್ನು ತೆರೆದಿರಬೇಕು. ಮೆಸ್ಕಾಂನವರು ಫೆ.25ರಿಂದ ಮಾರ್ಚ್ 6ರವರೆಗೆ ಅನಿಯಮಿತ ವಿದ್ಯುತ್ ಸರಬರಾಜು ನೀಡಬೇಕು. ಶಾಲಾ ಪ್ರಾರ್ಥನಾ ವೇಳೆ ಪಲ್ಸ್ ಪೋಲಿಯೋ ಲಸಿಕೆ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರ ಸಭೆಯಲ್ಲಿ ಪೋಷಕರಿಗೆ ಅರಿವು ಮೂಡಿಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಕ್ಷೇತ್ರದಲ್ಲಿ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮ ಯಶಸ್ವಿಗೊಳಿಸಿ:

ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕಸದ ವಾಹನಗಳಲ್ಲಿ ಲಸಿಕೆ ಕುರಿತಾದ ಜಿಂಗಲ್ಸ್‌ಗಳನ್ನು ಹಾಕಬೇಕು. ಜಿಲ್ಲಾದ್ಯಂತ ಎಲ್ಲೆಡೆ ಪಲ್ಸ್ ಪೋಲಿಯೋ ಲಸಿಕೆ ಕುರಿತು ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಚಟುವಟಿಕೆಗಳನ್ನು ಕೈಗೊಂಡು, ಒಂದು ಮಗುವೂ ಲಸಿಕೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು. ಸೋಷಿಯಲ್ ಮೀಡಿಯಾ, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಬಗ್ಗೆ ಪ್ರಚಾರ ಮಾಡಬೇಕು. ಇತರೇ ಇಲಾಖೆಗಳು ಸಮನ್ವಯದೊಂದಿಗೆ ಲಸಿಕಾ ಕಾರ್ಯಕ್ರಮವನ್ನು ಶೇ.100ರಷ್ಟು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಆರ್‌ಸಿಎಚ್‌ ಅಧಿಕಾರಿ ಡಾ.ನಾಗರಾಜನಾಯ್ಕ್ ಮಾತನಾಡಿ, ಅತಿ ಸೂಕ್ಷ್ಮ ಪ್ರದೇಶಗಳಿಂದ ಹಿಡಿದು ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ 1051 ಲಸಿಕಾ ಬೂತ್‌ಗಳನ್ನು ತೆರೆದು ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಪ್ರಾ.ಆ. ಸುರಕ್ಷಾ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರೋಟರಿ, ಲಯನ್ಸ್, ರೆಡ್‍ ಕ್ರಾಸ್ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವ್ಯಾಕ್ಸಿನೇಟರ್‌ಗಳಾಗಿ ಕಾರ್ಯನಿರ್ವಹಿಸುವರು. ಪ್ರತಿ ತಾಲೂಕುಗಳಲ್ಲಿ ನೋಡಲ್ ಅಧಿಕಾರಿ, ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಡಬ್ಲ್ಯುಎಚ್‍ಒ ಎಸ್‍ಎಂಒ ಡಾ.ಹರ್ಷಿತ್ ಮಾತನಾಡಿ, ಮಾರ್ಚ್ 3ರಂದು ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ವೈದ್ಯಕೀಯ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿಗೆ ಜಿಲ್ಲಾ ಮಟ್ಟದ, ಘಟಕ/ ಪ್ರಾ.ಆ. ಕೇಂದ್ರ ಮಟ್ಟದ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ನಗರ ಮತ್ತು ತಾಲೂಕು ಟಾಸ್ಕ್‌ಫೋರ್ಸ್ ಸಭೆಗಳು ನಡೆಯಲಿವೆ. ಮಾ.4 ಮತ್ತು 5ರಂದು ಮತ್ತು ನಗರ ಪ್ರದೇಶಗಳಲ್ಲಿ ಮಾ.6ರಂದು ಬೂತ್‍ಗಳಲ್ಲಿ ಬಿಟ್ಟುಹೋದ ಮಕ್ಕಳಿಗೆ ಮನೆ ಭೇಟಿ ನೀಡಿ, ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 103 ಸೂಕ್ಷ್ಮ ಪ್ರದೇಶ ಸೇರಿದಂತೆ 1051 ಬೂತ್‍ಗಳಲ್ಲಿ ಲಸಿಕೆ ಹಾಕಲು ಗುರುತಿಸಲಾಗಿದೆ. 30 ಮೊಬೈಲ್ ಟೀಂ ಸೇರಿದಂತೆ 2391 ತಂಡಗಳಲ್ಲಿ ಒಟ್ಟು 3919 ಸಿಬ್ಬಂದಿ ಹಾಗೂ 205 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ಎಲ್ಲ ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಐಎಂಎ, ಸಂಘ ಸಂಸ್ಥೆ ಪದಾಧಿಕಾರಿಗಳು ಇತರೆ ಅಧಿಕಾರಿಗಳು ಹಾಜರಿದ್ದರು.

- - - ದಡಾರ ಪರೀಕ್ಷೆ ನಡೆಸಿ ವರದಿ ನೀಡಿ

ಜಿಲ್ಲಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಕಂಡು ಬರುವ ಜ್ವರ ಮತ್ತು ದದ್ದು ಪ್ರಕರಣಗಳನ್ನು ಮೀಸಲ್ಸ್ ರುಬೆಲ್ಲಾ (ದಡಾರ) ಪರೀಕ್ಷೆ ನಡೆಸಿ ವರದಿ ನೀಡಬೇಕು. ಮೀಸಲ್ಸ್ ರುಬೆಲ್ಲಾ ಕುರಿತು ಸಮೀಕ್ಷೆಯನ್ನು ನಿಯಮಿತವಾಗಿ ಮಾಡಬೇಕು ಎಂದು ಜಿ.ಪಂ. ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಹೇಳಿದರು.

ಲಸಿಕೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಯಾವುದೇ ಮಗು ಮೀಸಲ್ಸ್ ರುಬೆಲ್ಲಾ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಎರಡೂ ಡೋಸ್‍ಗಳಲ್ಲಿ ಮಕ್ಕಳು ಡ್ರಾಪ್ ಔಟ್ ಆಗದಂತೆ ಕ್ರಮ ವಹಿಸುವ ಮೂಲಕ ಇದನ್ನು ನಿರ್ಮೂಲನೆಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ ಸಿಇಒ ಅವರು, ಮೀಸಲ್ಸ್ ರುಬೆಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ಮಾದರಿಗಳನ್ನು ಸಮರ್ಪಕವಾಗಿ ಕಳುಹಿಸಿದ ತಾಲೂಕು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹೇಳಿದರು.

ಡಬ್ಲ್ಯುಎಚ್‍ಒ ಎಸ್‍ಎಂಒ ಡಾ.ಹರ್ಷಿತ್, ಮೊದಲನೇ ಮತ್ತು ಎರಡನೇ ಸುತ್ತಿನ ಮೀಸಲ್ಸ್ ರುಬೆಲ್ಲಾ ಲಸಿಕಾಕರಣದಲ್ಲಿ ಜಿಲ್ಲೆಯು ಶೇ.87 ಪ್ರಗತಿ ಸಾಧಿಸಿದೆ ಎಂದರು.

- - - ಬಾಕ್ಸ್‌

27ಕ್ಕೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ

ಫೆ.27ರಂದು ಜಿಲ್ಲಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 19 ವರ್ಷದ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜಾಲ್‍ ಅನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಜಿ.ಪಂ ಸಿಇಒ ತಿಳಿಸಿದರು.

2023- 24ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 4,52,072 ಮಕ್ಕಳಿಗೆ ಆಲ್ಬೆಂಡಜಾಲ್ ನೀಡುವ ಗುರಿ ಹೊಂದಲಾಗಿದೆ. ಎಲ್ಲ ಅರ್ಹ ಮಕ್ಕಳು ಸದುಪಯೋಗ ಪಡೆಯಬೇಕು. ಶಿಕ್ಷಕರು ತಮ್ಮ ಮುಂದೆಯೇ ಮಕ್ಕಳು ಮಾತ್ರೆ ತೆಗೆದುಕೊಳ್ಳುವಂತೆ ನೋಡಬೇಕು ಎಂದರು.

ಜಂತುಹುಳುವಿನಿಂದ ಅಪೌಷ್ಟಿಕತೆ ಸೇರಿಂದತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಮಕ್ಕಳಿಗೆ ಶುಚಿತ್ವದ ಬಗ್ಗೆ, ಕೈ ತೊಳೆಯುವ ಕ್ರಮದ ಬಗ್ಗೆ ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು. ಶಿಕ್ಷಕರು ಜಂತುಹುಳು ನಿವಾರಣಾ ಮಾತ್ರೆ ನೀಡುವ ಬಗ್ಗೆ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಹೇಳಿದರು.

ಆರ್‌ಸಿಎಚ್‌ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೇಜು, ಐಟಿಐ, ಟೆಕ್ನಿಕಲ್ ಕೋರ್ಸ್ ಕಾಲೇಜುಗಳು, ಪ್ರಥಮ ಬಿಎ, ಮೆಡಿಕಲ್, ಆಯುರ್ವೇದಿಕ್ ಕಾಲೇಜುಗಳಲ್ಲಿ 1ರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಪಟ್ಟ ಅಂಗನವಾಡಿಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

- - - -19ಎಸ್‌ಎಂಜಿಕೆಪಿ02:

ಶಿವಮೊಗ್ಗ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಲಸಿಕಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್‌ ಲೋಖಂಡೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ