ಕನ್ನಡಪ್ರಭ ವಾರ್ತೆ ಕುಣಿಗಲ್
ರಾಜ್ಯದಲ್ಲಿ ಹಲವಾರು ಕನ್ನಡ ಶಾಲೆಗಳು ಮುಚ್ಚುವಂತಹ ಸ್ಥಿತಿಗೆ ತಲುಪಿದರು ಕೂಡ ಮುಖ್ಯಮಂತ್ರಿ ಸೇರಿದಂತೆ ಶಿಕ್ಷಣ ಸಚಿವರು ಮೌನವಾಗಿದ್ದಾರೆ ಎಂದು ಹೋರಾಟಗಾರ ಹಾಗೂ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಜಾಣಗೆರೆ ಸರ್ಕಾರಿ ಶಾಲೆಯ ಕಲಾ ವೈಭವ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು ಕನ್ನಡ ಪ್ರಾರ್ಥಮಿಕ ಶಿಕ್ಷಣ ಕಡ್ಡಾಯ ಆಗಬೇಕು, ಕೇವಲ ವಾಣಿಜ್ಯ ಉದ್ದೇಶದಿಂದ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸುತ್ತಾ ಜೇಬು ತುಂಬಿಸಿಕೊಳ್ಳುವ ಕೆಲಸವನ್ನು ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಹಲವಾರು ಶಾಲೆಗಳು ಮುಚ್ಚಿವೆ, ಇನ್ನೂ ಕೆಲವು ಮುಚ್ಚುವ ಹಂತದಲ್ಲಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಬಗ್ಗೆ ಉದಾಸಿನ ತೋರುತ್ತಿರುವುದು ಸರಿಯಿಲ್ಲ. ತಕ್ಷಣ ಇದರ ಬಗ್ಗೆ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಮತ್ತೊಂದು ಬಾರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವ ನಿಟ್ಟಿನಲ್ಲಿ ಜಾಣಗೆರೆ ಸರ್ಕಾರಿ ಶಾಲೆ, ವಾರ್ಷಿಕೋತ್ಸವ ಮಾಡುತ್ತಿರುವುದು ಅಭಿನಂದನ ವಿಚಾರ, ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದಾರೆ. ಶಾಲೆಗೆ ಬೇಕಾದ ಬಸ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಕೂಡ ದಾನಿಗಳು ಸಹಕಾರದಿಂದ ಇಲ್ಲಿನ ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಕರು ಮಾಡಿರುವುದು ಇಷ್ಟೆಲ್ಲಾ ಸಾಧನೆಗೆ ಕಾರಣವಾಗಿದೆ ಎಂದು ಅಭಿನಂದಿಸಿದರು.
ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಸಿಗುವ ಹಲವಾರು ಸೌಲಭ್ಯಗಳನ್ನು ಮಕ್ಕಳು ಬಳಸಿಕೊಳ್ಳಬೇಕು. ಸ್ಥಳೀಯರು ಉತ್ತಮ ಸಹಕಾರ ನೀಡಿದಾಗ ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಎಂಬಂತೆ ಹಲವಾರು ಸರ್ಕಾರಿ ಶಾಲೆಗಳು ಅಭಿವೃದ್ಧಿ ಮಾಡುವ ವಿಚಾರ ನಮ್ಮ ಕಣ್ಣಮುಂದಿದೆ. ಈ ವಿಚಾರವಾಗಿ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಗಮನಹರಿಸಬೇಕಿದೆ ಎಂದರು,ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಜ್ಞಾನಜೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಜಯ್,
ಬಿ.ಆರ್.ಸಿ. ಶ್ರೀನಿವಾಸ್, ರಾಜ್ಯ ಕೆ.ಆರ್.ಎಸ್. ಪಕ್ಷದ ಕಾರ್ಯದರ್ಶಿ ರಘು ಜಾಣಗೆರೆ, ಜನ್ಮಭೂಮಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಜಾಣಗೆರೆ ಶಿವಣ್ಣ, ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಮಯ್ಯ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಮ್ಮ ಸೇರಿದಂತೆ ಮುಖೇಶ್ ಶಿಕ್ಷಕ ಬಿಬಿ ರಂಗಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.ವಿಶೇಷವಾದ ಕೊರಿಯೋಗ್ರಾಫಿ ಮೂಲಕ ಉತ್ತಮ ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.