ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ, ಆಕ್ರೋಶ

KannadaprabhaNewsNetwork |  
Published : Jun 24, 2026, 03:30 AM IST
23ಕೆಎನ್‌ಕೆ-1ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದಕ್ಕೆ ಅಂಗನವಾಡಿ ಕೇಂದ್ರದ ಮುಂದೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಚಿಕ್ಕತಾಂಡಾದ ಬಾಣಂತಿ ಕುಟುಂಬಸ್ಥರು.೨೩ಕೆಎನ್‌ಕೆ೨ಬಾಣಂತಿಯರಿಗೆ ನೀಡಿದ ಮೊಟ್ಟೆ ಕಳಪೆ.   | Kannada Prabha

ಸಾರಾಂಶ

ಗರ್ಭಿಣಿ, ಬಾಣಂತಿಯರು, ಮಕ್ಕಳು ಇಂಥ ಕಳಪೆ ಗುಣಮಟ್ಟದ ಮೊಟ್ಟೆ ತಿಂದು ತೊಂದರೆಗೊಳಗಾದರೆ ಯಾರು ಹೊಣೆ

ಕನಕಗಿರಿ: ಮಾತೃಪೂರ್ಣ ಯೋಜನೆಯಡಿ ಬಾಣಂತಿಯರಿಗೆ ನೀಡಿದ ಮೊಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿದ ಕುಟುಂಬಸ್ಥರು ಅಂಗನವಾಡಿ ಕೇಂದ್ರದ ಎದುರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಅಡವಿಬಾವಿ ಚಿಕ್ಕತಾಂಡಾದಲ್ಲಿ ಮಂಗಳವಾರ ನಡೆದಿದೆ.

ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯಡಿ ಮಾಸಿಕ ೨೪ ಮೊಟ್ಟೆ ವಿತರಿಸಲಾಗುತ್ತಿದ್ದು, ಮೊಟ್ಟೆಗಳನ್ನು ಖರೀದಿಸಿ ಹಂಚಿಕೆ ಮಾಡುವ ಜವಾಬ್ಧಾರಿ ಆಯಾ ಅಂಗನವಾಡಿ ಕಾರ್ಯಕರ್ತರದ್ದಾಗಿರುತ್ತದೆ. ಗುಣಮಟ್ಟದ ಮೊಟ್ಟೆ ವಿತರಿಸುವ ಕೆಲಸ ಮಾಡಬೇಕು. ಆದರೆ, ಚಿಕ್ಕತಾಂಡಾದ ಅಂಗನವಾಡಿ ಕೇಂದ್ರ ಸಂಖ್ಯೆ ೧ರಲ್ಲಿ ಹಲವು ಗರ್ಭಿಣಿ/ಬಾಣಂತಿಯರಿಗೆ ಇತ್ತೀಚೆಗೆ ಮೊಟ್ಟೆ ವಿತರಿಸಲಾಗಿದೆ. ಹೀಗೆ ನೀಡಿದ ಮೊಟ್ಟೆ ಸೋಮವಾರ ರಾತ್ರಿ ಮನೆಯಲ್ಲಿ ಬೇಯಿಸಿದಾಗ ಓರ್ವ ಬಾಣಂತಿ ಮನೆಯಲ್ಲಿ ಐದಾರು ಹಾಗೂ ಮತ್ತೋರ್ವ ಬಾಣಂತಿಯ ಮನೆಯಲ್ಲಿ ಸುಮಾರು ನಾಲ್ಕೈದು ಮೊಟ್ಟೆಗಳು ತೀರಾ ಕಳಪೆಯಿಂದ ಕೂಡಿರುವುದು ಬೆಳಕಿಗೆ ಬಂದಿದೆ.

ಇದರಿಂದ ಆಕ್ರೋಶಗೊಂಡ ಓರ್ವ ಬಾಣಂತಿಯ ಕುಟುಂಬದ ಹರೀಶ ಮಂಗಳವಾರ ಉಳಿದ ಮೊಟ್ಟೆಗಳನ್ನು ಅಂಗನವಾಡಿಗೆ ಮರಳಿಸಿದ್ದಾರೆ. ಅಲ್ಲದೇ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಾಗ ತಾನು ಮರಳಿಸಿದ ಮೊಟ್ಟೆ ಜನತೆಗೆ ತೋರಿಸಲು ಕೇಳಿದಾಗ ಅಂಗನವಾಡಿಯವರು ಬದಲಿ ಮೊಟ್ಟೆ ನೀಡಿದ್ದಕ್ಕೆ ಆಕ್ರೋಶಗೊಂಡು ಮೊಟ್ಟೆಗಳನ್ನು ಸಾರ್ವಜನಿಕವಾಗಿಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಗರ್ಭಿಣಿ, ಬಾಣಂತಿಯರು, ಮಕ್ಕಳು ಇಂಥ ಕಳಪೆ ಗುಣಮಟ್ಟದ ಮೊಟ್ಟೆ ತಿಂದು ತೊಂದರೆಗೊಳಗಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಅಂಗನವಾಡಿಗೆ ಸರಬರಾಜಾಗುವ ಮೊಟ್ಟೆ ಮೇಲ್ವಿಚಾರಕರು ಪರಿಶೀಲನೆ ಮಾಡದಿರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಈ ರೀತಿಯ ವ್ಯವಸ್ಥೆ ಕೇವಲ ಇದೊಂದೇ ಅಂಗನವಾಡಿಗೆ ಸೀಮಿತವಾಗಿಲ್ಲ. ಪ್ರಶ್ನಿಸದ ಎಲ್ಲ ಕೇಂದ್ರಗಳಲ್ಲಿಯೂ ಇದೇ ಗತಿಯಾಗಿದೆ ಎಂದು ಗ್ರಾಮಸ್ಥರು ದೂರಿದರು.

ಸ್ಥಳಕ್ಕೆ ಸಿಡಿಪಿಒ ದಿಢೀರ್ ಭೇಟಿ, ಪರಿಶೀಲನೆ: ತಾಂಡಾ ಜನರ ದೂರಿನನ್ವಯ ಸ್ಥಳಕ್ಕೆ ಸಹಾಯಕ ಯೋಜನಾಧಿಕಾರಿ ವಿಜಯಲಕ್ಷ್ಮೀ ಹಿರೇಮಠ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದಕ್ಕೆ ತಾಂಡಾ ಜನರು ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕಳಪೆಯಾಗಿರುವ ಮೊಟ್ಟೆ ಮೊಬೈಲ್‌ನಲ್ಲಿ ವೀಕ್ಷಿಸಿದ ಸಿಡಿಪಿಒ ಇಂಥ ಮೊಟ್ಟೆ ವಿತರಣೆ ಮಾಡಬಾರದು ಎಂದು ತಿಳಿಸಿದರಲ್ಲದೇ ಕೇಂದ್ರದಲ್ಲಿನ ಎಲ್ಲ ಮೊಟ್ಟೆ ಪರಿಶೀಲಿಸಿ ನೋಡಿದಾಗ ಗಾತ್ರದಲ್ಲಿಯೂ ಚಿಕ್ಕದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರ ೨ ರಲ್ಲಿನ ಮೊಟ್ಟೆ ತರಿಸಿ ಪರಿಶೀಲಿಸಿದಾಗ ಅವು ಸಹ ಅದೇ ಗಾತ್ರವಾಗಿರುವುದಕ್ಕೆ ಜನತೆ ಬೇಸರ ವ್ಯಕ್ತಪಡಿಸಿದರು. ಭೀಮಣ್ಣ, ರಾಘವೇಂದ್ರ, ಚಿನ್ನಯ್ಯ ಇತರರಿದ್ದರು.

ಚಿಕ್ಕತಾಂಡಾದ ಅಂಗವಾಡಿ ಕೇಂದ್ರದಲ್ಲಿ ಕಳಪೆ ಮಟ್ಟದ ಮೊಟ್ಟೆ ವಿತರಿಸಲಾಗಿದೆ ಎನ್ನುವ ಆರೋಪದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗುವುದು. ಗುಣಮಟ್ಟದ ಮೊಟ್ಟೆ ವಿತರಿಸಲು ಸೂಚಿಸಿದ್ದೇನೆ.ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್ ನೀಡಲಾಗಿದೆ ಎಂದು ಎಸಿಡಿಪಿಒ ವಿಜಯಲಕ್ಷ್ಮೀ ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇವಿನ ಹಣ್ಣಿಗೆ ಭಾರಿ ಬೇಡಿಕೆ
ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಸಿಎಂ ಭೇಟಿ ನೀಡಲಿ