ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ: ರಾಜೇಂದ್ರ ರಾಣೆ

KannadaprabhaNewsNetwork |  
Published : Mar 09, 2026, 02:15 AM IST
ಮಹಿಳಾ ದಿನಾಚರಣೆ ಹಾಗೂ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಮಹಿಳೆಯರು ಉನ್ನತ ಸ್ಥಾನಕ್ಕೇರಲು ಮತ್ತು ಆರ್ಥಿಕ ಸಬಲೀಕರಣವಾಗಲು ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ.

ಕನ್ನಡಪ್ರಭ ವಾರ್ತೆ ಕಾರವಾರ

ಮಹಿಳೆಯರು ಉನ್ನತ ಸ್ಥಾನಕ್ಕೇರಲು ಮತ್ತು ಆರ್ಥಿಕ ಸಬಲೀಕರಣವಾಗಲು ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಈ ಯೋಜನೆಗಳು ಬಡತನ ನಿರ್ಮೂಲನೆಗೆ ಕಾರಣವಾಗಿದೆ ಎಂದು ತಾಲೂಕು ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ ಹೇಳಿದರು.

ಭಾನುವಾರ ತಾಪಂ ಸಭಾಂಗಣದಲ್ಲಿ ಕಾರವಾರ ತಾಲೂಕು ಪಂಚ ಗ್ಯಾರoಟಿ ಯೋಜನೆಗಳ ಅನುಷ್ಠಾನ ಸಮಿತಿಯು ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಕ್ತಿ ಯೋಜನೆಯಿಂದ ಮಹಿಳೆಯರು ನಾಡಿನಾದ್ಯಂತ ಉಚಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ. ಗೃಹ ಲಕ್ಷ್ಮಿ ಯೋಜನೆಯಿಂದ ಪ್ರತಿ ಕುಟುಂಬದ ಯಜಮಾನಿಗೆ ₹ 2,000 ನೀಡಲಾಗುತ್ತಿದೆ. ಗೃಹ ಜ್ಯೋತಿ ಮೂಲಕ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೂ ಉಚಿತವಾಗಿ ವಿದ್ಯುತ್ ನೀಡಲಾಗಿದ್ದು, ಇದರಿಂದ ಪಾವತಿಸಬೇಕಾದ ವಿದ್ಯುತ್ ಬಿಲ್ ಮೊತ್ತ ಉಳಿತಾಯವಾಗಲಿದೆ. ರಾಜ್ಯದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು, ನಿರೋದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದು ಒಟ್ಟಾರೆಯಾಗಿ ಪ್ರತಿ ಕುಟುಂಬಕ್ಕೆ ತಿಂಗಳಿನಲ್ಲಿ ₹5 ರಿಂದ 6 ಸಾವಿರ ಲಭಿಸುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಜೊತೆಗೆ ಬಡತನ ನಿರ್ಮೂಲನೆ ಮಾಡಲು ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದರು.ತಾಲೂಕು ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶ್ವಿನಿ ಬೋರಕರ್ ಮಾತನಾಡಿ, ಮಹಿಳೆಯರ ದಿನಾಚರಣೆ ಗಿವ್ ಟು ಗೇನ್ (ಕೊಟ್ಟು ಗಳಿಸು) ಎಂಬ ಘೋಷವಾಖ್ಯದೊಂದಿಗೆ ಈ ವರ್ಷ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಪ್ರೋತ್ಸಾಹ, ಅವಕಾಶ, ಸನ್ಮಾನ, ಸಮಾನತೆ ನೀಡಿ, ಸಬಲರಾನ್ನಾಗಿಸಿದ್ದಾಗ ಅವರೂ ದೇಶದ ಅಭಿವೃದ್ಧಿಗೆ ಸಹಕರಿಯಾಗಲಿದ್ದಾರೆ ಎಂದರು.ಭ್ರೂಣಾವಸ್ಥೆಯಿಂದಲೇ ಮಹಿಳೆಯರ ಸಂಘರ್ಷ ಆರಂಭವಾಗುತ್ತಿದ್ದು, ಗರ್ಭದಲ್ಲಿರುವ ಮಗು ಗಂಡು, ಹೆಣ್ಣು ಎಂದು ಲಿಂಗ ಪರೀಕ್ಷೆ ಮಾಡುವುದು ಮತ್ತು ಅದನ್ನು ಆಧರಿಸಿ ಗರ್ಭಪಾತ ಮಾಡುವುದು ಕಾನೂನುಬಾಹಿರ ಅಪರಾಧವಾಗಿದ್ದು, ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡಿಸುವವರು, ಮಾಡುವವರು ಕಂಡು ಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರದ ವೈದ್ಯರಿಗೆ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ, ಜಾರಿ ಅಧಿಕಾರಿ ಕಾರ್ಯಾಲಯದಲ್ಲಿ ಮಾಹಿತಿ ನೀಡಿ, ಮಾಹಿತಿ ನೀಡಿದದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಮತ್ತು ಅವರಿಗೆ ಸರ್ಕಾರದಿಂದ ₹ 1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದರು.ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಸದುಪಯೋಗ ಪಡಿಸಿಕೊಂಡ ಮಹಿಳಾ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಬಾಲ್ ಇನ್ ಬಟಲ್, ರಂಗೋಲಿ, ಕಣ್ಣು ಪಟ್ಟಿ ಆಟ, ಸಂಗೀತ ಹಾಗೂ ವಿವಿಧ ಸ್ಪರ್ಧೆ ಆಯೋಜಿಸಲಾಯಿತು.

ವಿಜೇತರಿಗೆ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಸತೀಶ್ ಕೆ. ಸೈಲ್ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ವಾ.ಕ.ರ.ಸಾ ಸಂಸ್ಥೆಯ ಕಾರವಾರ ಘಟಕದ ವ್ಯವಸ್ಥಾಪಕಿ ಸೌಮ್ಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಣಗೌಡರ, ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯರು, ಫಲಾನುಭವಿಗಳು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಾಂತದ ಅಡಿಯಲ್ಲಿ ಪಕ್ಷ ಕಟ್ಟುವುದು ಬಹಳ ಮುಖ್ಯ
ಹದಿಹರೆಯ ವಿದ್ಯಾರ್ಥಿ ಜೀವನದ ಸೂಕ್ಷ್ಮ, ಸವಾಲಿನ ಸಮಯ: ಡಾ. ಸುಜ್ಞಾನಿದೇವಿ