ಪ್ರದೀಪ್ ಈಶ್ವರ್ ನಡವಳಿಕೆಗೆ ಒಕ್ಕಲಿಗರ ಒಕ್ಕೂಟ ಬೇಸರ

KannadaprabhaNewsNetwork |  
Published : Oct 10, 2026, 01:15 AM IST
ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ರಘುನಾಥ್ ರೆಡ್ಡಿ ಮಾತನಾಡಿದರು | Kannada Prabha

ಸಾರಾಂಶ

ಶಾಸಕ ಪ್ರದೀಪ್ ಈಶ್ವರ್ ಅವರ ನಡವಳಿಕೆಗಳು ಇತ್ತೀಚಿನ ದಿನಗಳಲ್ಲಿ ಬೇಸರ ಮೂಡಿಸಿವೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುವ ರೀತಿಯ ನಡೆಗಳು ಸರಿಯಲ್ಲ.

ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುವ ಕೆಲಸ । ಒಕ್ಕಲಿಗರ ಸಮುದಾಯದ ಬೆಂಬಲದಿಂದ ನಿಮ್ಮ ಗೆಲುವು: ರಘುನಾಥ್ ರೆಡ್ಡಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಂದು ಕಡೆ ರಾಜಕೀಯ ನಾಯಕರ ನಡುವಿನ ವಾಕ್ಸಮರ, ಮತ್ತೊಂದು ಕಡೆ ಜಾತಿ ವಿಚಾರವಾಗಿ ಎದ್ದಿರುವ ವಿವಾದವು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ರಾಜ್ಯ ಒಕ್ಕಲಿಗರ ಒಕ್ಕೂಟದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಶಾಸಕರ ಇತ್ತೀಚಿನ ನಡವಳಿಕೆಗಳು ಬೇಸರ ಮೂಡಿಸಿವೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಒಕ್ಕೂಟದ ಮುಖಂಡರು ಆರೋಪಿಸಿದ್ದಾರೆ.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಘುನಾಥ್ ರೆಡ್ಡಿ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಅವರ ನಡವಳಿಕೆಗಳು ಇತ್ತೀಚಿನ ದಿನಗಳಲ್ಲಿ ಬೇಸರ ಮೂಡಿಸಿವೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುವ ರೀತಿಯ ನಡೆಗಳು ಸರಿಯಲ್ಲ. ಇತ್ತೀಚೆಗೆ ಅವರು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕೇವಲ 15 ಸಾವಿರ ಮಾತ್ರ ಒಕ್ಕಲಿಗರ ಮತಗಳಿವೆ. ಅವರ ಮತಗಳು ನನಗೆ ಬೇಡ ಎಂದು ತಿಳಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಸುಮಾರು 60 ಸಾವಿರ ಒಕ್ಕಲಿಗರ ಮತಗಳಿವೆ. 2023ರ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕಡಿಸಿರುವುದು ಇದೇ ಒಕ್ಕಲಿಗ ಸಮಾಜಕ್ಕೆ ಸೇರಿರುವ ಮಾಜಿ ಸಚಿವರಾದ ಡಾ.ಎಂ.ಸಿ.ಸುಧಾಕರ್, ಎನ್.ಎಚ್. ಶಿವಶಂಕರರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ನಿಮ್ಮ ಜನಾಂಗದ ಮುಖಂಡರಾದ ರಕ್ಷಾ ರಾಮಯ್ಯ ಎಂಬುದನ್ನು ಮರೆಯ ಬೇಡಿ. ಹಾಗೇಯೇ ನಿಮಗೆ ಒಕ್ಕಲಿಗ ಮತಗಳು ನಿರ್ಣಾಯಕವಾಗಿ ಬಿದ್ದಿದ್ದರಿಂಲೇ ನೀವು ಗೆದ್ದಿರುವುದು ಎಂಬುದನ್ನು ಮರೆಯ ಬೇಡಿ ಎಂದರು.

ನೀವು ಪಿಯುಸಿ ಮಾಡಿಕೊಂಡು ಸ್ಥಳೀಯ ಖಾಸಗಿ ಚಾನಲ್‌ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಇದೇ ಒಕ್ಕಲಿಗ ಸಮುದಾಯದ ಅಂದಿನ ಸಚಿವರು ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರು ನಿಮಗೆ ಪರಿಶ್ರಮ ಅಕಾಡೆಮಿ ಸ್ಥಾಪಿಸಲು ನೆರವಾದುದನ್ನು ಮರೆತಂತಿದೆ. ಒಕ್ಕಲಿಗರ ಸಮುದಾಯದ ಬೆಂಬಲದಿಂದ ಗೆದ್ದಿರುವ ನೀವು ಸಮುದಾಯದ ಭಾವನೆಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

ಎಲ್ಲಾ ಸಮುದಾಯಗಳು ಸೇರಿಯೇ ನಿಮಗೆ ಶಾಸಕ ಸ್ಥಾನ ನೀಡಿರುವುದು ಎಂಬುದನ್ನು ಅರಿತು ಕೊಂಡು ಎಲ್ಲಾ ಸಮುದಾಯಗಳನ್ನುಸಾಮರಸ್ಯ ಮತ್ತು ಒಗ್ಗಟ್ಟಿನಿಂದ ಮುಂದಕ್ಕೆ ತೆಗೆದು ಕೊಂಡು ಹೋಗುವುದನ್ನು ಬಿಟ್ಟು ಜಾತಿ -ಜಾತಿಗಳ ನಡುವೆ ವಿಷ ಬೀಜ ಬಿತ್ತಿತ್ತಿರುವುದು ನಿಮಗೆ ಶೋಭೆ ತರುವುದಿಲ್ಲ. ರಾಜಕೀಯ ವಿಚಾರಗಳನ್ನು ಜಾತಿಯ ವಿಚಾರಗಳೊಂದಿಗೆ ಬೆರೆಸುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದಲ್ಲದೇ, ಶಾಸಕ ಪ್ರದೀಪ್ ಈಶ್ವರ್ ಗೆ ಎಚ್ಚರಿಕೆ ನೀಡಿದರು.

ಶಾಸಕ ಪ್ರದೀಪ್ ಈಶ್ವರ್ ಅವರಿಗೆ ತಾಕತ್ತಿದ್ದರೆ ಬಿ.ಫಾರಂ ತಂದು 2028 ವಿಧಾನಸಭೇ ಚುನಾವಣೆಯಲ್ಲಿ ಸ್ಫರ್ಧಿಸಿ ಜಯಗಳಿಸಲಿ. ಆದರೆ, ಈ ಆರೋಪಗಳಿಗೆ ಶಾಸಕ ಪ್ರದೀಪ್ ಈಶ್ವರ್ ಅವರ ಪ್ರತಿಕ್ರಿಯೆ ಏನು ಎಂಬುದು ತಿಳಿದುಬರಬೇಕಿದೆ. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ನಾಯಕರ ನಡುವಿನ ಭಿನ್ನಾಭಿಪ್ರಾಯದ ಜೊತೆಗೆ ಜಾತಿ ವಿಚಾರವೂ ಚರ್ಚೆಗೆ ಬಂದಿದೆ.

ಒಂದು ಕಡೆ ರಾಜಕೀಯ ಗೊಂದಲ. ಮತ್ತೊಂದು ಕಡೆ ಸಮುದಾಯಗಳ ನಡುವಿನ ಅಸಮಾಧಾನ.. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಒಕ್ಕೂಟದ ಹಿರಿಯ ಮುಖಂಡ ಮಂಜುನಾಥ್, ರಾಜ್ಯ ಜಂಟಿ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸರೆಡ್ಡಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಗೌರಿಬಿದನೂರು ತಾಲೂಕು ಅಧ್ಯಕ್ಷ ಬಚ್ಚರೆಡ್ಡಿ, ಟಿ.ವಿ.ಚಂದ್ರಶೇಖರ್ ಮತ್ತಿತರರು ಇದ್ದರು.

ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ರಘುನಾಥ್ ರೆಡ್ಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ