ಸರ್ಕಾರಿ ಸೇವೆ ತ್ವರಿತ ತಲುಪಿಸಲು ಪ್ರಜಾಸೇವಾ ಆಂದೋಲನ: ಎಂ. ಕುಮಾರಸ್ವಾಮಿ

KannadaprabhaNewsNetwork |  
Published : Sep 20, 2026, 03:15 AM IST
ಕಾರಟಗಿಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಕಾರಟಗಿ ಪಟ್ಟಣದ ಅಮ್ಮಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರಜಾಸೇವಾ ಇಲಾಖೆ, ತಾಲೂಕಾಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಶನಿವಾರ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿತ್ತು.

ಕಾರಟಗಿ: ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸಲು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ‘ಪ್ರಜಾಸೇವಾ ಆಂದೋಲನ’ ಉತ್ತಮ ವೇದಿಕೆಯಾಗಿದೆ. ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ನಿಯಮಾನುಸಾರ ಪರಿಶೀಲಿಸಿ, ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಅಮ್ಮಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರಜಾಸೇವಾ ಇಲಾಖೆ, ತಾಲೂಕಾಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ಮಟ್ಟದಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ವಿಶೇಷ ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ನಾಯಕ ಮಾತನಾಡಿ, ಜನಸಾಮಾನ್ಯರ ಕೆಲಸಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಳಂಬ ಮಾಡದೆ ಆದ್ಯತೆಯ ಮೇರೆಗೆ ಮಾಡಬೇಕು. ಸಾರ್ವಜನಿಕರಿಗೆ ಕಚೇರಿಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಿ, ಅವರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಸೇವೆ ಒದಗಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಹಾಗೂ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ್ ಮಾತನಾಡಿ, ರೈತರು ಹಾಗೂ ಸಾರ್ವಜನಿಕರು ಪುರಸಭೆ ಮತ್ತು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಪಹಣಿ, ಮ್ಯುಟೇಷನ್, ನೋಂದಣಿ ಸೇರಿದಂತೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಗಾಗಿ ಅಲೆದಾಡುವ ಪರಿಸ್ಥಿತಿ ತಪ್ಪಬೇಕು ಎಂದರು.

ಪುರಸಭೆ ಸದಸ್ಯ ಎಚ್. ಈಶಪ್ಪ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪಿಂಚಣಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಜನರು ನಿತ್ಯ ಅರ್ಜಿಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಇಲಾಖೆಗಳ ಕೌಂಟರ್‌: ಕಲ್ಯಾಣ ಮಂಟಪದ ಆವರಣದಲ್ಲಿ ವಿವಿಧ ಇಲಾಖೆಗಳ ಕೌಂಟರ್‌ ತೆರೆಯಲಾಗಿತ್ತು. ಕಂದಾಯ, ಪುರಸಭೆ, ತಾಪಂ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.

ತಾಪಂ ಇಒ ಲಕ್ಷ್ಮೀದೇವಿ ಯಾದವ್, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ್, ಸ್ಥಾಯಿ ಸಮಿತಿ ಅಧ್ಯಕ್ಷ ಭೂದಿ ದೊಡ್ಡ ಬಸವರಾಜ, ಪುರಸಭೆ ಸದಸ್ಯ ಎಚ್. ಈಶಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಸೋಮನಾಥ ದೊಡ್ಡಮನಿ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಶಿಧರಗೌಡ ಪಾಟೀಲ್ ಹಾಗೂ ಶಿವರೆಡ್ಡಿ ನಾಯಕ, ಪ್ರಮುಖರಾದ ಚೆನ್ನಬಸಪ್ಪ ಸುಂಕದ್, ಶರಣಪ್ಪ ಪರಕಿ, ಮರಿಯಪ್ಪ ಸಾಲೋಣಿ, ಅಯ್ಯಪ್ಪ ಉಪ್ಪಾರ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ್, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಹಾಜರಿದ್ದರು.

‘ವಂದೇ ಮಾತರಂ’ಗೂ ಭಯವೇ?:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ತವರೂರಲ್ಲೇ ಕಂದಾಯ, ಪುರಸಭೆ ಹಾಗೂ ತಾಪಂ ಅಧಿಕಾರಿಗಳು ಆಯೋಜಿಸಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಹಾಡನ್ನೂ ಹಾಡಿಸದೆ ಕಾರ್ಯಕ್ರಮ ಮುಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಪಟ್ಟಣದ ಅಮ್ಮಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರಜಾಸೇವಾ ಇಲಾಖೆ, ತಾಲೂಕಾಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹಾಗೂ ಅಧಿಕಾರಿಗಳು ಇದ್ದರು. ಆದರೆ ವಂದೇ ಮಾತರಂ ಹಾಡಿಸದೇ ಕಾರ್ಯಕ್ರಮ ಪೂರ್ಣಗೊಳಿಸಲಾಯಿತು.ವಿವಾದ ಆಗಬಾರದು ಎಂಬ ಭಯದಿಂದಲೇ ಅಧಿಕಾರಿಗಳು ‘ವಂದೇ ಮಾತರಂ’ ಹಾಡಿಸದೆ ಕಾರ್ಯಕ್ರಮ ಮುಗಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ