ಬ್ರಹ್ಮಾವರ: ಇಲ್ಲಿನ ಹೆಗ್ಗುಂಜೆ ಗ್ರಾಮದ ಮಂದಾರ್ತಿಯಲ್ಲಿ ಕಾಡುಹಂದಿ ಬೇಟೆಗಾಗಿ ಅಪಾಯಕಾರಿ ಕಚ್ಛಾ ಬಾಂಬ್‌ಗಳನ್ನು ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಚೆನ್ನಗಿರಿ ಮೂಲದ ಕಾಶಿನಾಥ ಜೆ.ಎಸ್. (30), ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಯಾಹೋ ಶಿವು (25) ಬಂಧಿತರು. ಅ.12ರಂದು ಹಂದಿಗಾಗಿ ಇಟ್ಟಿದ್ದ ಕಚ್ಛಾ ಬಾಂಬನ್ನು ಕಚ್ಚಿದ ಸುಧೀರ್ ಪೂಜಾರಿ ಎನ್ನುವರ ಸಾಕು ನಾಯಿ ಮೃತಪಟ್ಟಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಬಂಧಿಸಿದರು. ಅವರಿಂದ 15 ಸಾವಿರ ಮೌಲ್ಯದ ಬೈಕು, ಎರಡು ಮೊಬೈಲ್ ಮತ್ತು 10 ಸಾವಿರ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಪಿಎಸ್‌ಐ ರಾಜಶೇಖರ ವಂದಲಿ ಮತ್ತವರ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ನಾಯಿ ಸತ್ತ ಘಟನಾ ಸ್ಥಳದಿಂದ 22 ಸಜೀವ ಕಚ್ಛಾ ಬಾಂಬ್‌ಗಳನ್ನು ಪತ್ತೆ ನಿಷ್ಕ್ರಿಯಗೊಳಿಸಿದ್ದರು. ಬಂಧಿತ ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಇನ್ನಿತರ ಕಡೆ ಸ್ಥಳೀಯವಾಗಿ ಸಿಗುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಬಳಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಿ ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಭಾಗಗಳಲ್ಲಿ ಬಳಕೆ ಮಾಡಿ ಕಾಡು ಹಂದಿಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದರು. ಫೋಟೋ ಃ ಬಾಂಬ್ ಅರೆಸ್ಟ್