ಹಿಂಗಾರು ಬಿತ್ತನೆಗೆ ಸಿದ್ಧತೆ, ಮಳೆ ಆಗಮನಕ್ಕೆ ಅನ್ನದಾತನ ಕಾತರ

KannadaprabhaNewsNetwork |  
Published : Sep 09, 2026, 02:00 AM IST
ಬಿತ್ತನೆಗೆ ಸಿದ್ಧಗೊಂಡಿರುವ ಭೂಮಿ | Kannada Prabha

ಸಾರಾಂಶ

ಮುಂಗಾರು ಮಳೆ ಕೊರತೆಯಿಂದ ಹೆಸರು, ಉದ್ದು ಸೇರಿದಂತೆ ಬೆಳೆಗಳ ಇಳುವರಿ ಕುಂಠಿತಗೊಂಡ ಬೆನ್ನಲ್ಲೇ ಇದೀಗ ಹಿಂಗಾರು ಬಿತ್ತನೆಗೆ ರೈತರು ಭೂಮಿ ಹದಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ.

ರಫೀಕ ಕಲೇಗಾರ

ಅಣ್ಣಿಗೇರಿ:

ಮುಂಗಾರು ಮಳೆ ಕೊರತೆಯಿಂದ ಹೆಸರು, ಉದ್ದು ಸೇರಿದಂತೆ ಬೆಳೆಗಳ ಇಳುವರಿ ಕುಂಠಿತಗೊಂಡ ಬೆನ್ನಲ್ಲೇ ಇದೀಗ ಹಿಂಗಾರು ಬಿತ್ತನೆಗೆ ರೈತರು ಭೂಮಿ ಹದಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅಕ್ಟೋಬರ್‌ ಮೊದಲ ವಾರದಲ್ಲಿ ಬಿತ್ತನೆ ಆರಂಭಿಸಬೇಕಿರುವ ಹೊತ್ತಿನಲ್ಲಿ ಮಳೆಯ ಲಕ್ಷಣ ಕಾಣಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಒಟ್ಟು 34,730 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಕೈಗೊಳ್ಳಲು ರೈತರು ಸಿದ್ಧತೆ ನಡೆಸಿದ್ದಾರೆ. ಯರೇ(ಕರಿ) ಹೊಲ ಹರಗಿ ಭೂಮಿ ಹದಗೊಳಿಸಿ ದ್ವಿದಳ ಧಾನ್ಯ ಕಡಲೆ, ಜೋಳ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ, ಬಿರುಕು ಬಿಟ್ಟ ಭೂಮಿಗೆ ಬಿತ್ತನೆ ಪೂರ್ವ ಮಳೆಯ ಅಗತ್ಯವಿದ್ದು, ವರುಣನ ಕೃಪೆಗಾಗಿ ರೈತರು ದೇವರ ಮೊರೆ ಹೋಗುವಂತಾಗಿದೆ.

ಮಳೆಯೇ ಬೆಳೆ ಜೀವಾಳ:

ಜೂನ್‌ನಿಂದ ಅಕ್ಟೋಬರ್‌ ವರೆಗೆ ಕಾಲಾನುಸಾರ ಮಳೆಯಾದರೆ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರ ಕೈ ಸೇರುತ್ತವೆ. ಇದರಿಂದ ಕೃಷಿ ಆಧಾರಿತ ಕುಟುಂಬಗಳ ಆರ್ಥಿಕ ಬದುಕಿಗೂ ಆಸರೆಯಾಗುತ್ತದೆ. ಹಿಂದೆ ಕಾಲಕಾಲಕ್ಕೆ ಮಳೆಯಾಗುತ್ತಿದ್ದ ಪರಿಣಾಮ ಉತ್ತಮ ಇಳುವರಿ ಪಡೆಯಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆಯ ಏರುಪೇರಿನಿಂದ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜೂನ್‌ನಲ್ಲಿ ಬಿತ್ತನೆ ಬಳಿಕ ಮೃಗಶಿರ, ಆರಿದ್ರಾ, ಪುನರ್ವಸು ಸೇರಿದಂತೆ ನಿರೀಕ್ಷಿತ ಮಳೆ ಬಾರದೆ, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಪರಿಣಾಮ ಹೆಸರು, ಉದ್ದು ಬೆಳೆಗಳ ಇಳುವರಿ ಸುಮಾರು ಶೇ. 70ರಷ್ಟು ಕುಂಠಿತಗೊಂಡಿದ್ದು, ರೈತರಿಗೆ ನಿರಾಶೆ ಮೂಡಿಸಿದೆ. ಈಗ ಹಿಂಗಾರು ಬಿತ್ತನೆಗೆ ಭೂಮಿ ಸಿದ್ಧವಾಗಿದ್ದರೂ ಮಳೆಯ ಸುಳಿವಿಲ್ಲ. ಉತ್ತರಾ, ಹಸ್ತ ಸೇರಿದಂತೆ ಮಳೆ ನಕ್ಷತ್ರಗಳ ಅವಧಿಯೂ ಮುಗಿಯುತ್ತಿದ್ದು, ಮಳೆಯ ಕೊರತೆ ಮುಂದುವರಿದರೆ ಮುಂಗಾರಿನಂತೆಯೇ ಹಿಂಗಾರು ಬೆಳೆಗಳ ಇಳುವರಿಗೂ ಹೊಡೆತ ಬೀಳುವ ಆತಂಕ ರೈತರಲ್ಲಿದೆ.

ನೈಸರ್ಗಿಕ ಮಳೆಯ ನಿರೀಕ್ಷೆ:

ನೈಸರ್ಗಿಕವಾಗಿ ಉತ್ತಮ ಮಳೆಯಾದರೆ ಬೆಳೆಗಳಿಗೆ ಅಗತ್ಯ ಪೌಷ್ಟಿಕಾಂಶ ದೊರೆಯುವ ಜತೆಗೆ ಇಳುವರಿಯೂ ಉತ್ತಮವಾಗಲಿದೆ ಎಂಬುದು ವೈಜ್ಞಾನಿಕ ಅಭಿಪ್ರಾಯ. ಮೋಡ ಬಿತ್ತನೆಯಂತಹ ಕೃತಕ ಮಳೆ ಪ್ರಯೋಗಗಳಿಗಿಂತ ನೈಸರ್ಗಿಕ ಮಳೆಯ ಮೇಲೆಯೇ ಕೃಷಿ ಅವಲಂಬಿತವಾಗಿರುವ ಪ್ರದೇಶಗಳಲ್ಲಿ ರೈತರ ನಿರೀಕ್ಷೆ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಕ್ರಮಕೈಗೊಂಡರೂ, ನಿರ್ದಿಷ್ಟ ಸಾಂದ್ರತೆಯ ಮೋಡಗಳಿದ್ದಾಗ ಮಾತ್ರ ಸಿಲ್ವರ್‌ ಅಯೋಡೈಡ್‌ ಸೇರಿದಂತೆ ರಾಸಾಯನಿಕ ಬಳಸಿ ಕೃತಕವಾಗಿ ಮಳೆ ತರಿಸುವ ಪ್ರಯತ್ನ ಪರಿಣಾಮಕಾರಿಯಾಗುತ್ತದೆ. ಹವಾಮಾನದಲ್ಲಿ ವ್ಯತ್ಯಯವಾದರೆ ಮೋಡ ಬಿತ್ತನೆ ಪ್ರಯೋಜನಕಾರಿಯಾಗದ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಬೇಸಿಗೆಯಲ್ಲಿ ಭೂಮಿ ಬಿರುಕು ಬಿಟ್ಟಿರುವಂತಾಗಿದೆ. ಹಂತ-ಹಂತವಾಗಿ ಮಳೆ ನೀರು ಬಿದ್ದರೆ ಭೂಮಿಗೆ ತೇವಾಂಶ ಹಾಗೂ ಫಲವತ್ತತೆ ಹೆಚ್ಚಾಗಿ ಇಳುವರಿ ಉತ್ತಮವಾಗಲಿದೆ ಎಂದು ಪ್ರಗತಿಪರ ರೈತ ಶಶಿಧರಯ್ಯ ಮುಖಣ್ಣಮಠ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಒಟ್ಟಾರೆ ಹಿಂಗಾರು ಬಿತ್ತನೆಗೆ ಭೂಮಿ ಸಿದ್ಧವಾಗಿದ್ದರೂ ಮಳೆಯ ಕೊರತೆ ಅನ್ನದಾತರ ಆತಂಕ ಹೆಚ್ಚಿಸಿದೆ. ಬಿತ್ತನೆ ಪೂರ್ವ ಮಳೆಯೊಂದಿಗೆ ಹಿಂಗಾರು ಹಂಗಾಮಿನಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗಲಿ, ಭೂಮಿ ಹಸಿರಾಗಲಿ, ಬೆಳೆ ಕೈ ಸೇರಲಿ ಎಂಬ ಆಶಯದೊಂದಿಗೆ ರೈತರು ವರುಣನ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಮಳೆಗಾಲದಲ್ಲಿಯೇ ಭೂಮಿ ಬೇಸಿಗೆಯಂತೆ ಬಿರುಕು ಬಿಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಿಂಗಾರು ಬೆಳೆಗಳಿಗೂ ತೊಂದರೆಯಾಗಲಿದೆ.

ಬಿ.ವಿ. ಪಾಟೀಲ, ನಾವಳ್ಳಿ ಗ್ರಾಮದ ರೈತನೈಸರ್ಗಿಕ ಹಾಗೂ ಕೃತಕ ಮಳೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕೃತಕ ಮಳೆಗೆ ಸೂಕ್ತ ವಾತಾವರಣ ಮತ್ತು ಮೋಡಗಳ ಸಾಂದ್ರತೆ ಅಗತ್ಯವಾಗಿದೆ.

ಡಾ. ಸಂತೋಷ ಒಂಟಿ, ಧಾರವಾಡ ಕೃಷಿ ವಿವಿಯ ಬೇಸಾಯ ಶಾಸ್ತ್ರ ತಜ್ಞ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ