ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಭಾನುವಾರ ಸಂಜೆ ನಡೆದ ಧರ್ಮ ಸಭೆಯಲ್ಲಿ ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠ, ಶಕಟಪುರ ಶ್ರೀ ವಿದ್ಯಾಪೀಠಾಧೀಶರುಗಳು ಸೇರಿದಂತೆ ಜಗದ್ಗುರುತ್ರಯರು ಪಾಲ್ಗೊಂಡಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ವೇದಗಳು ಸಮಾಜಕ್ಕೆ ಮಾರ್ಗದರ್ಶಿಯೂ ಆಗಿದೆ. ಭಗವಂತನ ಇಚ್ಛೆ ಧರ್ಮದ ರಕ್ಷಣೆಯಾಗಿದ್ದು ದುಷ್ಟರನ್ನು ಸಂಹರಿಸುವ ಮೂಲಕ ಧರ್ಮವನ್ನು ರಕ್ಷಿಸಿದ್ದಾನೆ. ಸರ್ವರ ಹಿತವನ್ನು ಬಯಸುವ ಸನಾತನ ಧರ್ಮದಲ್ಲಿ ಸಾಮಾಜಿಕ ತತ್ವಗಳಿವೆ. ಅನ್ನದಾನಕ್ಕೆ ಹೆಸರಾದ ಕರ್ನಾಟಕದ ಭೂಮಿಯನ್ನು ಹಸನಾಗಿಸಲು ಸಾವಯವ ಕೃಷಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕಿದೆ ಎಂದು ಹೇಳಿದರು.ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಮಹಾಸ್ವಾಮಿ ಮಾತನಾಡಿ, ಮೂಲ ಮತ್ತು ಪ್ರದಾನ ಮಠದಲ್ಲಿ ಸಾಕಾರಗೊಳ್ಳದ ಧರ್ಮಸಭೆ ಶಾಖಾ ಮಠದಲ್ಲಿ ಆಯೋಜನೆಗೊಂಡಿರುವುದು ಮಠದ ಪಾಲಿಗೆ ಸುದಿನವಾಗಿದೆ. ಕಾಂಚಿ ಕಾಮಕೋಟಿ ಪೀಠಾಧೀಶರ ನೇತೃತ್ವದಲ್ಲಿ ವೇದದ ರಕ್ಷಣೆಯಾಗಿದೆ. ವೇದದ ರಕ್ಷಣೆಗೆ ಪರಮಾಚಾರ್ಯರ ಸಮಯದಲ್ಲಿ ಯೋಜನೆ ರೂಪುಗೊಂಡಿದ್ದು ಆ ಪೀಠದ ಯೋಜನೆಗಳು ಕರ್ನಾಟಕಕ್ಕೂ ಬರುವಂತಾಗಬೇಕು ಎಂದು ಹೇಳಿದರು.
ಶನಿವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ ಕಾಂಚಿ ಕಾಮಕೋಟಿ ಶ್ರೀಗಳಿಗೆ ಅದ್ಧೂರಿ ಸ್ವಾಗತ ನೀಡಲಾಯ್ತು.
ಶಕಟಪುರದ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು ಮಾತನಾಡಿ, ಭಗವಂತನ ಕೃಪೆಗೆ ಭಕ್ತಿ ಒಂದೇ ಮಾನದಂಡವಾಗಿದೆ. ಮನುಷ್ಯನ ಮನದಲ್ಲಿ ಭಕ್ತಿಯ ಮಾಲೆ ಧರಸಿಲ್ಲವಾದರೆ ಸಜ್ಜನರು ದುರ್ಜನರ ನಡುವಿನ ವ್ಯತ್ಯಾಸವೇ ತಿಳಿಯುವುದಿಲ್ಲಾ. ಇಂದಿಲ್ಲಿ ಮೂರು ಪೀಠಗಳ ಸಮಾವೇಶ ಸಾಕಾರಗೊಂಡಿದ್ದು ಇದು 30 ಪೀಠದ ಸಮಾಗಮಕ್ಕೆ ಸಾಟಿಯಾಗಿದೆ. ಅತೀ ಶೀಘ್ರದಲ್ಲೇ ಶಂಕರಾಚಾರ್ಯ ಪೀಠದ 30 ಯತಿಗಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.