ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಮಂಗಳವಾರ ನಡೆದ ಅಹಿಂದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿಯ ಪರವಾಗಿ ರಾಜ್ಯಾದ್ಯಂತ ಸಂಘಟಿತ ಹೋರಾಟ ರೂಪಿಸುವಂತೆ ಮುಖಂಡರಿಗೆ ಸೂಚಿಸಿದರು.ನಿಮ್ಮ ಕ್ಷೇತ್ರದ ಶಾಸಕರು ಯಾರೇ ಇರಲಿ, ಅವರನ್ನು ಭೇಟಿ ಮಾಡಿ ಜಾತಿ ಗಣತಿಯ ಪರವಾಗಿ ನಿಲ್ಲುವಂತೆ ಒತ್ತಾಯಿಸಬೇಕು. ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕರಿಗೆ ತಾಕೀತು ಮಾಡಬೇಕು. ಎಲ್ಲ ಕ್ಷೇತ್ರಗಳಿಂದಲೂ ಒತ್ತಡ ಹೆಚ್ಚಾದಾಗ ಜಾತಿ ಗಣತಿಯನ್ನು ಜಾರಿಗೊಳಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯೇ ಇರುವುದಿಲ್ಲ ಎಂದು ತಿಳಿಸಿದರು.ಜಾತಿ ಗಣತಿಯನ್ನು ಕೇವಲ ಜನಸಂಖ್ಯೆಯ ತಲೆ ಎಣಿಕೆಯಾಗಿ ನೋಡಬಾರದು. ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಗುರುತಿಸಿ, ಹಿಂದುಳಿದ ಸಮುದಾಯಗಳಿಗೆ ಅಗತ್ಯ ಯೋಜನೆ, ಸೌಲಭ್ಯ ಮತ್ತು ಅವಕಾಶಗಳನ್ನು ಕಲ್ಪಿಸುವುದೇ ಸಮೀಕ್ಷೆಯ ಮುಖ್ಯ ಉದ್ದೇಶ ಎಂದು ಪ್ರತಿಪಾದಿಸಿದರು.ಯಾವ ಸಮುದಾಯ ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬ ನಿಖರ ಮಾಹಿತಿ ಇಲ್ಲದಿದ್ದರೇ ಆ ಸಮುದಾಯವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವುದು ಹೇಗೆ? ನಿಖರ ಅಂಕಿ ಅಂಶಗಳ ಆಧಾರದಲ್ಲಿಯೇ ಸರ್ಕಾರ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಹೀಗಾಗಿ ಜಾತಿ ಗಣತಿ ಅತ್ಯಂತ ಮಹತ್ವದ್ದಾಗಿದೆ ಎಂದರು.ಸಮೀಕ್ಷೆಯಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಬಂದಿದೆಂಬ ಕಾರಣಕ್ಕೆ ಕೆಲವರು ವರದಿಯೇ ತಪ್ಪಾಗಿದೆ ಎಂದು ಗದ್ದಲ ಎಬ್ಬಿಸುತ್ತಾರೆ. ಆದರೆ, ಒಂದು ಸಮುದಾಯದ ಹಿಂದುಳಿದಿರುವಿಕೆಯನ್ನು ಕೇವಲ ಜನಸಂಖ್ಯೆಯ ಆಧಾರದಲ್ಲಿ ನಿರ್ಧರಿಸಲಾಗುವುದಿಲ್ಲ. ಸಮುದಾಯದ ಸಾಮಾಜಿಕ ಸ್ಥಿತಿ, ಶಿಕ್ಷಣದ ಮಟ್ಟ, ಆರ್ಥಿಕ ಪರಿಸ್ಥಿತಿ ಹಾಗೂ ಲಭ್ಯವಿರುವ ಅವಕಾಶಗಳನ್ನು ಪರಿಗಣಿಸಿಯೇ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾಗುತ್ತದೆ. ಈ ವಾಸ್ತವವನ್ನು ಅಹಿಂದ ಮುಖಂಡರು ತಮ್ಮ ಸಮುದಾಯದ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.ಜಾತಿ ಗಣತಿ ಮತ್ತೆ ನಡೆಯಬೇಕು ಹಾಗೂ ಅದರ ವರದಿ ಜಾರಿಗೆ ಬರಬೇಕು ಎಂಬ ಆಗ್ರಹವನ್ನು ಅಹಿಂದ ಸಂಘಟನೆಗಳು ಪ್ರಬಲವಾಗಿ ಮುಂದಿಡಬೇಕು. ಕೇವಲ ಮನವಿ ಸಲ್ಲಿಸಿದರೆ ಸಾಲದು. ಕ್ಷೇತ್ರವಾರು ಸಂಘಟನೆ ಕಟ್ಟಿಕೊಂಡು ಶಾಸಕರನ್ನು ಪ್ರಶ್ನಿಸಬೇಕು. ಸರ್ಕಾರ ನಿರ್ಣಯ ಕೈಗೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಬೇಕು ಎಂದು ಪುನರುಚ್ಚರಿಸಿದರು.ಅಹಿಂದ ಸಂಘಟನೆಯನ್ನು ರಾಜ್ಯಾದ್ಯಂತ ಬಲಪಡಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧ. ಮುಂದಿನ 10 ತಿಂಗಳಲ್ಲಿ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬಲು ಮುಖಂಡರು ಕಾರ್ಯಪ್ರವೃತ್ತರಾಗಬೇಕು.
-ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವರು.