ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಹೇಳುವಂತೆ ಬೆದರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇ.ಡಿ ಅಧಿಕಾರಿಗಳ ವಿರುದ್ಧ ನೀಡಿದ ದೂರು ಆಧರಿಸಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಹೇಳುವಂತೆ ತಮಗೆ ಬೆದರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ನೀಡಿದ ದೂರು ಆಧರಿಸಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾದಂತಾಗಿದೆ. ತನ್ಮೂಲಕ ವಾಲ್ಮೀಕಿ ಹಗರಣದ ಮುಂದಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ.
ಇದುವರೆಗೆ ಕೇಂದ್ರ ತನಿಖಾ ಸಂಸ್ಥೆಗಳಾದ ಇ.ಡಿ., ಸಿಬಿಐ ಹಾಗೂ ಎನ್‌ಐಎ ವಿರುದ್ಧ ರಾಜಕೀಯವಾಗಿ ಆರೋಪ ಮಾಡುತ್ತಿದ್ದ ರಾಜ್ಯ ಸರ್ಕಾರವು ಇದೀಗ ಇ.ಡಿ. ಮೇಲೆ ಎಫ್‌ಐಆರ್ ದಾಖಲಿಸಿ ಕೇಂದ್ರ ಸರ್ಕಾರದ ಜತೆ ನೇರ ಸಮರಕ್ಕಿಳಿದೆ ಎನ್ನಲಾಗುತ್ತಿದೆ.
ಇ.ಡಿ. ಅಧಿಕಾರಿಗಳಾದ ಮಿತ್ತಲ್ ಹಾಗೂ ಮುರಳಿ ಕಣ್ಣನ್ ವಿರುದ್ಧ ಆರೋಪ ಬಂದಿದ್ದು, ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರಿಗೆ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಬಿ.ಕಲ್ಲೇಶ್ ದೂರು ಸಲ್ಲಿಸಿದ್ದಾರೆ. ಅದರನ್ವಯ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸಂಘಟಿತ ಅಪರಾಧ (3 (5), 35(2), ಬೆದರಿಕೆ (351) ಹಾಗೂ ವ್ಯಕ್ತಿ ಮೇಲೆ ಪ್ರಚೋದನೆ (352) ನೀಡಿದ ಆರೋಪದಡಿ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹಣಕಾಸು ಇಲಾಖೆ ಹೆಸರಿಸುವಂತೆ ಇ.ಡಿ. ಕಿರುಕುಳ:
‘ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಇ.ಡಿ. ತನಿಖೆ ನಡೆಸುತ್ತಿದೆ. ಈ ಪ್ರಕರಣ ಸಂಬಂಧ ನನಗೆ ವಿಚಾರಣೆಗೆ ಹಾಜರಾಗುವಂತೆ ಜು.16 ರಂದು ದೂರವಾಣಿ ಮೂಲಕ ಕರೆ ಮಾಡಿ ಇ.ಡಿ. ಅಧಿಕಾರಿಗಳು ತಿಳಿಸಿದ್ದರು. ಅದರಂತೆ ನಾನು ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ಹೋಗಿದ್ದು, ನನ್ನ ಹೇಳಿಕೆಯನ್ನು ಇ.ಡಿ. ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ದಾಖಲಿಸಿದ್ದರು’ ಎಂದು ದೂರಿನಲ್ಲಿ ಕಲ್ಲೇಶ್ ತಿಳಿಸಿದ್ದಾರೆ.
‘ವಿಚಾರಣೆ ವೇಳೆ ನನಗೆ 17 ಪ್ರಶ್ನೆಗಳಿಗೆ ಕೇಳಿದ್ದು, ನಾನು 17 ಪ್ರಶ್ನೆಗಳಿಗೂ ಉತ್ತರ ನೀಡಿದೆ. ಅದರಲ್ಲಿ 3 ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ (ಫೈಲ್) ಬೇಕು ಹಾಗೂ ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆ ಎಂದು ತಿಳಿಸಿದೆ. ಆಗ ಕಣ್ಣನ್‌ರವರು ಜು.18ರ ಮಧ್ಯಾಹ್ನ 2 ಗಂಟೆಗೆ ಬನ್ನಿ. ಆಗ ಕಡತ ತರಿಸಿ ಮತ್ತು ಇತರ ಅಧಿಕಾರಿಗಳನ್ನು ಕರೆಯುತ್ತೇನೆಂದು ತಿಳಿಸಿದ್ದರು. ವಿಚಾರಣೆ ಮುಗಿದು ನನ್ನ ಕಡೆಯಿಂದ ನನ್ನ ಹೇಳಿಕೆಗೆ ಸಹಿ ಪಡೆದರು. ನಾನು ನನ್ನ ಹೇಳಿಕೆಯ ಪ್ರತಿಯನ್ನು ನನಗೊಂದು ಕೊಡಿ ಎಂದು ಕೇಳಿದೆ. ಆದರೆ ಸದರಿಯವರು ಕೊಡಲಿಲ್ಲ.’
‘ನಂತರ ಪುನಃ ನನ್ನನ್ನು ಪ್ರಶ್ನೆ ಕೇಳಿದರು. ಆದರೆ ಈ ಸಲ ಯಾವುದೇ ಲಿಖಿತ ರೂಪದಲ್ಲಿ ಪ್ರಶ್ನೆ ನೀಡಲಿಲ್ಲ. ಎಂ.ಜಿ.ರೋಡ್ ಬ್ಯಾಂಕ್ ಖಾತೆಗೆ ಖಜಾನೆಯ ಮೂಲಕ ಹಣವನ್ನು ವಾಲ್ಮೀಕಿ ನಿಗಮ ಜಮಾ ಮಾಡಿರುವುದು ತಪ್ಪು ಎಂದು ಹೇಳಿದರು. ಆಗ ನಾನು ಸರ್ಕಾರದ ಆದೇಶದ ಪ್ರಕಾರ ಬಿಲ್ ಮಾಡಿ, ಮಾ.25 ರಂದು ಜಮಾ ಮಾಡಿದ್ದೇನೆ. ಆದರೆ ಈ ಖಾತೆಯಲ್ಲಿ ಮಾ.5 ರಿಂದಲೇ ಹಣ ಅಕ್ರಮ ವರ್ಗಾವಣೆಯಾಗಿರುತ್ತದೆ. ಆದ್ದರಿಂದ ನನ್ನದು ಯಾವುದು ತಪ್ಪಿಲ್ಲ ಎಂದು ಹೇಳಿದೆ. ಆದರೂ ಸಹ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆಂದು ಧಮ್ಕಿ ಹಾಕಿದರು. 2 ವರ್ಷಗಳಾದರೂ ನಿಮಗೆ ಬೇಲ್ ಸಿಗುವುದಿಲ್ಲವೆಂದು ಬೈದರು.’
‘ಇ.ಡಿ.ಯು ನಿಮಗೆ ಸಹಾಯ ಮಾಡುತ್ತದೆ. ಆದರೆ ನೀವು ಎಂ.ಜಿ ರೋಡ್ ಖಾತೆಗೆ ಅನುದಾನ ಜಮಾ ಮಾಡಲು ಮಾಜಿ ಮಂತ್ರಿ ಬಿ.ನಾಗೇಂದ್ರ, ಸರ್ಕಾರದ ಹೈಯಷ್ಟ್ ಆಥಾರಿಟಿ (ಉನ್ನತಾಧಿಕಾರ) ಹಾಗೂ ಎಫ್‌ಡಿ (ಹಣಕಾಸು) ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಂಡರೆ ನಿಮ್ಮನ್ನು ಬಿಡುತ್ತೇವೆ. ಇಲ್ಲದಿದ್ದರೆ ಅರೆಸ್ಟ್ ಮಾಡುತ್ತೇವೆ ಎಂದು ಮಾನಸಿಕ ಹಿಂಸೆ ನೀಡಿದರು.’
‘ನಂತರ ಮುರಳಿ ಕಣ್ಣನ್ ಅವರು ಮಿತ್ತಲ್ ಅವರ ಹತ್ತಿರ ಕಳುಹಿಸಿದರು. ಮಿತ್ತಲ್ ಸರ್ ಅವರು ನನ್ನನ್ನು ನಿಲ್ಲಿಸಿ ಈ ರೀತಿ ಬೈದರು. (1) ನೀನೊಬ್ಬ ಅಪರಾಧಿ (2) ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ (3)ಇ.ಡಿ. ಬಗ್ಗೆ ನಿನಗೆ ಗೊತ್ತಿಲ್ಲ (4) 2-3 ವರ್ಷ ನಿನಗೆ ಬೇಲ್ ಸಿಗುವುದಿಲ್ಲ (5) ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ (6) ಇದು ಪ್ರಯೋಜನಕ್ಕೆ ಬರುವುದಿಲ್ಲ (7) ನಿನಗೆ ಇ.ಡಿ. ಸಹಾಯ ಮಾಡಬೇಕೆಂದರೆ ನೀನು ಬರೆದುಕೊಡಬೇಕು. ಎಂಜಿ ರೋಡ್ ಖಾತೆಗೆ ಹಣವನ್ನು ಸಿಎಂ ಸರ್, ನಾಗೇಂದ್ರ ಸರ್ ಹಾಗೂ ಎಫ್‌ಡಿ ನಿರ್ದೇಶನದಂತೆ ಮಾಡಿರುತ್ತೇನೆ. ಅವರ (ಮುಖ್ಯಮಂತ್ರಿ ಹಾಗೂ ಸಚಿವರು) ಒತ್ತಡ ಇತ್ತು ಎಂದು ಬರೆದುಕೊಡು ಎಂದು ತಿಳಿಸಿದರು.’
‘ಪದೇ ಪದೇ ಇದೇ ಪ್ರಶ್ನೆ ಕೇಳಿ, ‘ನಿನಗೆ 7 ವರ್ಷ ಜೈಲು ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲ’ ಎಂದು ಬೈದು, ನನ್ನನ್ನು ಭಯಭೀತನನ್ನಾಗಿ ಮಾಡಿದರು. ನಂತರ ಮಿತ್ತಲ್ ಅವರು ಕಣ್ಣನ್ ಅವರಿಗೆ ಫೋನು ಮಾಡಿ ತಮ್ಮ ಚೇಂಬರ್‌ಗೆ ಕರೆಯಿಸಿಕೊಂಡರು. ಪುನಃ ಇಬ್ಬರು ಸೇರಿ ಅದೇ ಪ್ರಶ್ನೆ ಕೇಳಿದರು. ಸಿಎಂ ಸರ್, ನಾಗೇಂದ್ರ ಸರ್ ಮತ್ತು ಎಫ್.ಡಿ ರವರ ಸೂಚನೆ ಇತ್ತು ಎಂದು ಒಪ್ಪಿಕೋ. ಇಲ್ಲದಿದ್ದರೇ ಈಗಲೇ ಅರೆಸ್ಟ್ ಮಾಡುತ್ತೇನೆಂದು ನನಗೆ ಭಯ ಮೂಡಿಸಿದರು’
‘ಕೊನೆಗೆ ಇಬ್ಬರೂ ಚರ್ಚಿಸಿ ಏನು ಮಾಡೋಣ? ಅರೆಸ್ಟ್ ಮಾಡೋಣವೇ ಎಂದು ಮಾತನಾಡಿಕೊಂಡರು. ಆಗ ಮುರಳಿ ಕಣ್ಣನ್ ಅವರು, ಇವತ್ತು ಬೇಡ.. ಜು.18 ಬರುತ್ತಾರಲ್ಲ ಅವತ್ತು ಮಾಡೋಣ ಎಂದು ತಿಳಿಸಿದರು. ಆದ್ದರಿಂದ ನಾನು ಯಾವುದೇ ತಪ್ಪು ಮಾಡದಿದ್ದರೂ ಸಹ ಕಾನೂನುಬಾಹಿರವಾಗಿ ವಿಚಾರಣೆ ಮಾಡಿ ನನಗೆ ಬೈದು ಬೆದರಿಕೆ ಹಾಕಿರುವ ಮಿತ್ತಲ್ ಹಾಗೂ ಕಣ್ಣನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.’