ಕಾರಟಗಿ: ಕನಕಗಿರಿ ಕ್ಷೇತ್ರದಲ್ಲಿ ಮೊದಲ ಆದ್ಯತೆಯಾಗಿ ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ರಾಜ್ಯ ಸರ್ಕಾರದಿಂದ ಕನಕಗಿರಿ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಅನುಕೂಲಕ್ಕಾಗಿ ಭವನಗಳನ್ನು ನಿರ್ಮಿಸಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ನಮ್ಮ ಸರ್ಕಾರದ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ನಾನು ಕೈಗೊಂಡ ಎಲ್ಲ ಕಾಮಗಾರಿಗಳನ್ನು ಸಕಾಲಕ್ಕೆ ಮುಗಿಸಲಾಗುವುದು ಎಂದರು.
ಬೇಸಿಗೆ ದಿನಗಳ ಆರಂಭವಾಗುತ್ತಿದ್ದು, ಕ್ಷೇತ್ರದ ಕಾರಟಗಿ ಮತ್ತು ಕನಕಗಿರಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಲು ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮತ್ತೆರಡು ಬಸ್‌ಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಕಾರ್ಯಕರ್ತರೆ ಉತ್ತರಿಸುತ್ತಾರೆ: ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳು ಜಾರಿಗೆ ಬರುತ್ತಿರುವುದನ್ನು ನೋಡಿ ಮಾಜಿ ಶಾಸಕರಿಗೆ ಹಾಗೂ ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. ಬಿಜೆಪಿಗರು ಸುಳ್ಳು ಮತ್ತು ಅಪಪ್ರಚಾರ ಮಾಡಲು ನಿಸ್ಸೀಮರು. ಮಾಜಿ ಶಾಸಕರಿಗೆ ಗೌರವಯುತವಾಗಿ ಮಾತನಾಡುವುದಾಗಲಿ, ಗೌರವ ಪಡೆಯುವುದಾಗಲಿ ತಿಳಿದಿಲ್ಲ. ಇನ್ನು ಬಿಜೆಪಿಗರು ನನ್ನ ಕುರಿತು ಅಪಪ್ರಚಾರ ಮಾಡಿದರೆ ಅವರಿಗೆ ನಮ್ಮ ಕಾರ್ಯಕರ್ತರೇ ತಿರುಗೇಟು ನೀಡುತ್ತಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಸಂಗಮೇಶಗೌಡ, ಸುರೇಶ ಬೆಳ್ಳಿಕಟ್ಟಿ, ಶರಣೇಗೌಡ ಕೊಂತಾನೂರು, ಶಿವರಾಜ್ ಗೋನಾಳ, ಶಂಕ್ರಪ್ಪ, ವೀರನಗೌಡ ಮಾಲಿಪಾಟೀಲ್, ಶರಣಪ್ಪ ಪರಕಿ, ಶಿವಕುಮಾರ್ ಬಜಾರ್, ದೇವಪ್ಪ ಬಾವಿಕಟ್ಟಿ, ಬಸವರಾಜ್, ಶಿವಕುಮಾರ್ ತೆಕ್ಕಲಕೋಟೆ, ಶರಣಪ್ಪ ಬಂದ್ರಾಳ ಇದ್ದರು.