ವಿಡಂಬನೆಯಿಂದಲೇ ಸಮಾಜ ತಿದ್ದುತ್ತಿದ್ದ ಪ್ರೊ.ಎಚ್ಚೆಲ್ಕೆ: ಲೀಲಾ ಅಪ್ಪಾಜಿ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಎಚ್ಚೆಲ್ಕೆ ಅವರು ಉತ್ತಮ ವಿಚಾರಗಳಿಗೆ ಅಕ್ಷರರೂಪ ಕೊಟ್ಟು ಸಮಾಜದ ಒಳಿತು ಬಯಸಿದ್ದ ಅವರ ಲೇಖನಗಳನ್ನು ಓದುವಾಗ ನಕ್ಕು ಸುಮ್ಮನಾಗಿ ಬಿಟ್ಟರೆ ಅರ್ಥವಾಗುತ್ತಿರಲಿಲ್ಲ, ಬದಲಾಗಿ ಅವರ ವಿಷಯದ ಬಗ್ಗೆ ಆಲೋಚನೆ ಮಾಡಿದರೆ ಅವರು ಏನು ಹೇಳಿದ್ದಾರೆ ಎಂಬುದು ತಿಳಿಯುತಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಡಂಬನೆ ಬರಹದ ಮೂಲಕ ಸಮಾಜ ತಿದ್ದುವ ಕೆಲಸವನ್ನು ಪ್ರೊ.ಎಚ್ಚೆಲ್ಕೆ ಅವರು ತಮ್ಮ ಜೀವನದುದ್ದಕ್ಕೂ ಮಾಡಿದರು ಎಂದು ನಿವೃತ್ತ ಪ್ರಾಂಶುಪಾಲೆ ಲೀಲಾ ಅಪ್ಪಾಜಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಾಧ್ಯಾಪಕರಾಗಿ ಶಿಕ್ಷಣದ ಮಹತ್ವ ಜೊತೆಗೆ ಅರಿವು ಹಂಚಿದವರು ಎಚ್ಚೆಲ್ಕೆ. ಅದೇ ರೀತಿ ಸಮಾಜದಲ್ಲಿ ಮೌಲ್ಯದ ಮಹತ್ವ ಸಾರಿದವರು. ಪ್ರಾಧ್ಯಾಪಕ, ಪತ್ರಕರ್ತ ಹಾಗೂ ಸಮಾಜಮುಖಿಯಾಗಿ ವೈಚಾರಿಕತೆ ಹಿನ್ನೆಲೆಯ ವಿಚಾರವನ್ನು ಜನ ಸಾಮಾನ್ಯರಲ್ಲಿ ಬಿತ್ತಿದ್ದಲ್ಲದೆ ವಿಡಂಬನೆ ಬರಹದ ಮೂಲಕ ಸಮಾಜ ತಿದ್ದುವ ಕೆಲಸವನ್ನು ಎಚ್ಚೆಲ್ಕೆ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದರು ಎಂದು ಶ್ಲಾಘಿಸಿದರು.

ಎಚ್ಚೆಲ್ಕೆ ಅವರು ಉತ್ತಮ ವಿಚಾರಗಳಿಗೆ ಅಕ್ಷರರೂಪ ಕೊಟ್ಟು ಸಮಾಜದ ಒಳಿತು ಬಯಸಿದ್ದ ಅವರ ಲೇಖನಗಳನ್ನು ಓದುವಾಗ ನಕ್ಕು ಸುಮ್ಮನಾಗಿ ಬಿಟ್ಟರೆ ಅರ್ಥವಾಗುತ್ತಿರಲಿಲ್ಲ, ಬದಲಾಗಿ ಅವರ ವಿಷಯದ ಬಗ್ಗೆ ಆಲೋಚನೆ ಮಾಡಿದರೆ ಅವರು ಏನು ಹೇಳಿದ್ದಾರೆ ಎಂಬುದು ತಿಳಿಯುತಿತ್ತು ಎಂದರು.

ಮಂಡ್ಯ ಜಿಲ್ಲೆಯಲ್ಲಿರುವ ಸಿರಿಧಾನ್ಯ ಬೆಳೆಯಲು ಮುಂದಾಗಬೇಕು, ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆ ನೀರನ್ನು ಮಿತ ಬಳಸಿ ಕೃಷಿ ಮಾಡಬೇಕು. ವೈಚಾರಿಕ ಪ್ರಶಸ್ತಿಯನ್ನು ಸಿರಿಧಾನ್ಯ ಕೃಷಿಕರಿಗೆ ನೀಡಿರುವುದು ಹೆಚ್ಚಿನ ಮಹತ್ವ ತಂದಿದೆ, ಪ್ರಶಸ್ತಿಯಿಂದ ಕುಂದಗೋಳದ ಬೀಬೀ ಪಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಜವಾಬ್ದಾರಿ ಹೆಚ್ಚಾಗಿದೆ, ಸಿರಿಧಾನ್ಯ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ ಎಂಬ ಅರಿವು ಜನಸಾಮಾನ್ಯರಲ್ಲಿ ಮೂಡಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಬಿಬಿಜಾನ್ ಮಾತನಾಡಿ, ಜನರು ಆರೋಗ್ಯದಿಂದ ಇರಲಿ ಎಂಬುದೇ ನಮ್ಮ ಆಶಯವಾಗಿದೆ, ಆ ನಿಟ್ಟಿನಲ್ಲಿ ಸಿರಿಧಾನ್ಯ ಉತ್ಪಾದನೆಯಿಂದ ನಮ್ಮ ಬದುಕಿನಲ್ಲಿ ಬದಲಾವಣೆಯಾಗಿದೆ, ಹಂತ ಹಂತವಾಗಿ ಮುನ್ನಡೆ ಕಂಡಿದ್ದು, ಹಲವರಿಗೆ ಉದ್ಯೋಗ ದೊರಕಿದೆ, ಮತ್ತಷ್ಟು ಜನರಿಗೆ ಕೆಲಸ ನೀಡಬೇಕೆಂಬ ಆಸೆ ಇದೆ, ಸಿರಿಧಾನ್ಯ ಉತ್ಪಾದಿಸಿ, ಸಂಸ್ಕರಿಸಿ ಮಾರಾಟ ಮಾಡುವುದರ ಜೊತೆಗೆ ಸಿರಿಧಾನ್ಯದ ಆಹಾರ ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದೇವೆ, ಜನತೆ ಒಳ್ಳೆಯ ಊಟ ಮಾಡಲಿ ಎಂಬುದೇ ನನ್ನ ಆಶಯ ಎಂದರು.

ಮೈಸೂರಿನ ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್‌ ಮಾತನಾಡಿ, ಸಿರಿಧಾನ್ಯದ ಬಗ್ಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ, ಹಲವು ಕಡೆ ಪಾಲಿಸ್ ಮಾಡಿದ ಸಿರಿಧಾನ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ, ಪಾಲಿಶ್ ಮಾಡದ ಸಿರಿಧಾನ್ಯ ಬಳಕೆ ಉತ್ತಮ ಅದು ಆರೋಗ್ಯಕ್ಕೂ ಒಳಿತಾಗಲಿದೆ ಎಂದು ಸಲಹೆ ನೀಡಿದರು.

ಆರನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿಯನ್ನು ಕುಂದಗೋಳದ ಬೀಬೀ ಪಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಇದೇ ಸಂದರ್ಭದಲ್ಲಿ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು, ರೈತ ಮುಖಂಡ ಕೆ.ಬೋರಯ್ಯ ಭಾಗವಹಿಸಿದ್ದರು.

Share this article