ಬಳ್ಳಾರಿ: ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಮತ್ತು ಇತರೆ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಪೊಲೀಸರ ಕ್ರಮವನ್ನು ಖಂಡಿಸಿ ನಗರದಲ್ಲಿ ಎಐಎಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ಜರುಗಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ರದ್ದತಿ, ಅದರ ನಂತರದ ವಿವಾದಗಳು ಮತ್ತು ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಈಗಾಗಲೇ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಈ ವ್ಯವಸ್ಥಿತ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಮೌನದ ವಿರುದ್ಧ ಪ್ರತಿಭಟಿಸಿ, ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಮತ್ತು ಇತರ ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯವು ತೀವ್ರವಾಗಿ ಕ್ಷೀಣಿಸುತ್ತಿದೆ ಎಂದು ವೈದ್ಯಕೀಯ ವರದಿಗಳು ಈಗ ಎಚ್ಚರಿಸುತ್ತಿವೆ. ಇಂದು ಬೆಳಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗಾರರನ್ನು ಎಳೆದುಕೊಂಡು ಹೋಗಿರುವ ಸರ್ಕಾರ ಹಾಗೂ ಪೊಲೀಸರ ಕ್ರಮ ಅತ್ಯಂತ ಖಂಡನೀಯವಾಗಿದ್ದು ಇದೊಂದು ಪ್ರಜಾತಾಂತ್ರಿಕ ಹೋರಾಟಕ್ಕೆ ಸರ್ಕಾರ ಮಾಡುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಸೋನಂ ವಾಂಗ್ಚುಕ್ ಮತ್ತು ಇತರೆ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಪೊಲೀಸರ ಕ್ರಮವನ್ನು ಖಂಡಿಸಿ ಬಳ್ಳಾರಿಯಲ್ಲಿ ಶನಿವಾರ ಎಐಎಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.