ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಆಂದೋಲನ

KannadaprabhaNewsNetwork |  
Published : Feb 14, 2026, 01:15 AM IST
 ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಶ್ರೀರಂಗಾಚಾರಿ ಮಾತನಾಡಿದರು | Kannada Prabha

ಸಾರಾಂಶ

ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನೆಪದಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರವು ಜಿಲ್ಲಾ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಯೋಜಿಸುತ್ತಿದ್ದು, ಇದನ್ನು ಖಂಡಿಸಿ ನಮ್ಮ ಆರೋಗ್ಯ ಹಕ್ಕನ್ನು ಪಡೆಯಲು ನಾವು ರಾಜ್ಯಾದ್ಯಂತ ಬೀದಿಗೆ ಇಳಿಯಬೇಕಾಗಿದೆ ಎಂದು ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಶ್ರೀರಂಗಾಚಾರಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ನೀತಿ ಆಯೋಗದ ಶಿಫಾರಿಸ್ಸಿನಂತೆ ಕರ್ನಾಟಕದ 8 ಜಿಲ್ಲೆಗಳಲ್ಲಿ (ತುಮಕೂರು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ ಮತ್ತು ದಾವಣಗೆರೆ) ವೈದ್ಯಕೀಯ ಶಿಕ್ಷಣ ಸಚಿವರು ಶರಣ್ ಪ್ರಕಾಶ್ ಪಾಟೀಲ್ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನೆಪದಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಈ ರೀತಿ ಖಾಸಗಿ ಅವರಿಗೆ ಕೊಟ್ಟರೆ, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡ ಜನರ ಆರೋಗ್ಯವನ್ನು ಕಾಪಾಡುವ ಬದಲು ಅವರನ್ನು ಕೊಂದಂತೆ ಆಗುತ್ತದೆ ಮತ್ತು ಜನರಿಗಾಗಿ ಸೂಕ್ತ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ ಎಂದರು.

ಚಿಕಿತ್ಸೆ ನಿರಾಕರಣೆ, ಚಿಕಿತ್ಸೆ ದುಬಾರಿ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಇನ್ನೂ ಉಚಿತ ಔಷಧಿಗಳು ಮತ್ತು ರಕ್ತ ಪರೀಕ್ಷೆಗಳನ್ನು ಪೂರೈಸದೆ, ಎಲ್ಲಾ ಸೇವೆಗಳನ್ನು ಖಚಿತಪಡಿಸದೆ, ಗುಣಮಟ್ಟದ ಆರೈಕೆಯನ್ನು ನಿರ್ವಹಿಸದೆ, ಜನರಿಗೆ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ತಾತ್ಸಾರ ಬರುವಂತೆ ಮಾಡಿ ಈಗ ಅದನ್ನು ಖಾಸಗಿಯವರ ಕೈಗೊಪ್ಪಿಸಲು ಹೊರಟಿದೆ ಹಾಗೂ ಖಾಸಾಗಿಯಾದಲ್ಲಿ, ಪ್ರಜಾತಾಂತ್ರಿಕವಾದ ಸರ್ಕಾರದ ಹೊಣೆಗಾರಿಕೆ ಇಲ್ಲದ ಹಾಗೆ ಆಗುವುದು. ಅದಲ್ಲದೆ ಇದರಿಂದ ಬರುವ ಖಾಸಗಿ ವೈದ್ಯಕೀಯ ಕಾಲೇಜು ಹೆಚ್ಚಾಗಿ ಪ್ರಬಲ ವರ್ಗ ಮತ್ತು ಜಾತಿಯ ವಿದ್ಯಾರ್ಥಿಗಳಿಗೆ ಮಾತ್ರ ಕೈಗೆಟುಕುವವು ಮತ್ತು ಬಹುಪಾಲು ಅರ್ಹ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ತಮ್ಮ ನೌಕರ ಹಕ್ಕುಗಳನ್ನು ಸಹ ಕಳೆದುಕೊಳ್ಳುತ್ತಾರೆ ಎಂದರು.ಜನರು ಖಾಸಗಿಕರಣವನ್ನು ತೀವ್ರವಾಗಿ ಖಂಡಿಸಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು ಹಾಗೂ ಜನರಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ, ಔಷಧಿ ಸಿಗಬೇಕು. ಇದಕ್ಕಾಗಿ ಹಲವಾರು ಸಂಘಟನೆಗಳ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ, ಎಲ್ಲಾ 31 ಜಿಲ್ಲೆಗಳಲ್ಲಿ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು.

ಜೀವಿಕ ಜಿಲ್ಲಾ ಸಂಘಟನೆ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ನಮಗೆ ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಕಾನೂನು ಬೇಕಾಗಿದೆ. ಯಾವುದೇ ಸರ್ಕಾರವು ಹಿಂತೆಗೆದುಕೊಳ್ಳಬಹುದಾದ ಯೋಜನೆಯಲ್ಲ. ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂಬ ನಮ್ಮ ಹಕ್ಕೂತ್ತಾಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಕೋರ್ಡಿನೇಟರ್ ಶಮೀರ್ ಜಿ, ಕರ್ನಾಟಕ ವಿಕಲಚೇತನರ ಸಂಘಟನೆ ರಾಜ್ಯಾಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯಂ, ನಿಸರ್ಗ ಸೊಸೈಟಿ. ಸಂವಿಧಾನ ಸಂರಕ್ಷಣಾಪಡೆ ಸಂಚಾಲಕ ನಾರಾಯಣಪ್ಪ, ಮಹಿಳಾ ಸಂಚಾಲಕಿ ಮಮತಾ ಮತ್ತಿತರರು ಇದ್ದರು

ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಶ್ರೀರಂಗಾಚಾರಿ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬದ ಸವಿ ನೆನಪಿಗೆ ಗಿಡನೆಟ್ಟು ಪೋಷಿಸಬೇಕು: ಶಾಸಕ ತಮ್ಮಯ್ಯ
ತಳ ಸಮುದಾಯಗಳ ಕುಲದೈವದ ಶೋಧ ನಡೆಸಬೇಕು