ಅವೈಜ್ಞಾನಿಕ ಜಾತಿ ಗಣತಿ ಬಿಡುಗಡೆಗೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Oct 19, 2024, 12:24 AM IST
18ಕೆಎಂಎನ್ ಡಿ15 | Kannada Prabha

ಸಾರಾಂಶ

ರಾಜ್ಯದಲ್ಲಿ ಒಕ್ಕಲಿಗರ ಜಾತಿಯಲ್ಲಿ ನೂರಾರು ಉಪಪಂಗಡಗಳಿದ್ದು ಜಾತಿಗಣತಿ ತಯಾರಿಸುವಾಗ ಉಪ ಪಂಗಡಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿದ್ದು, ಎಲ್ಲಾ ಉಪ ಪಂಗಡಗಳನ್ನು ಒಂದಾಗಿ ಸೇರಿಸಿ ಒಕ್ಕಲಿಗ ಜಾತಿ ಎಂದು ಸೇರ್ಪಡೆಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಅವೈಜ್ಞಾನಿಕ ಜಾತಿ ಗಣತಿ ಬಿಡುಗಡೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ತಾಲೂಕು ಸಂಘಟನೆ ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ಆಗಮಿಸಿದ ಸಂಘಟನೆಯ ನೂರಾರು ಕಾರ್ಯಕರ್ತರು ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ, ಜಾತಿಗಣತಿಯನ್ನು ಕೈಬಿಡುವಂತೆ ಒತ್ತಾಯಿಸಿದರು.

ಎಲ್ಲಾ ಸಮುದಾಯದವರಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು. ಆದರೆ, ಸರಕಾರ ತರಾತುರಿಯಲ್ಲಿ ವರದಿ ಮಂಡನೆಗೆ ಮುಂದಾಗಿ ಹಲವು ಸಂದೇಶಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು ಆಯೋಗವು 5.98 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ ಎಂಬ ಹೇಳಿಕೆ ನೀಡಿದ್ದು, ಉಳಿದವರ ಮಾಹಿತಿಯನ್ನು ಕ್ರೋಢೀಕರಿಸಿ ಅಗತ್ಯ ಮಾಹಿತಿ ಕಲೆ ಹಾಕುವಂತೆ ಜತೆಗೆ ಒಂದು ಕೋಟಿಗೂ ಅಧಿಕ ಜನಸಂಖ್ಯೆಯ ಮಾಹಿತಿಯೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಆಯೋಗ ರಚನೆಯಾದ 10 ವರ್ಷಗಳ ಬಳಿಕ ಸರಕಾರ ಅನುಷ್ಠಾನಕ್ಕೆ ಮುಂದಾಗಿದ್ದು, ಯಾವ ಕಾರಣಕ್ಕೆ ಎಂಬುವುದು ಬಹಿರಂಗವಾಗಬೇಕಿದೆ. ಸರಕಾರಕ್ಕೆ ಸಲ್ಲಿಕೆಯಾದ ವರದಿಗೆ ಸದಸ್ಯ ಕಾರ್ಯದರ್ಶಿಯೇ ಸಹಿ ಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ರಾಜ್ಯದಲ್ಲಿ ಒಕ್ಕಲಿಗರ ಜಾತಿಯಲ್ಲಿ ನೂರಾರು ಉಪಪಂಗಡಗಳಿದ್ದು ಜಾತಿಗಣತಿ ತಯಾರಿಸುವಾಗ ಉಪ ಪಂಗಡಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿದ್ದು, ಎಲ್ಲಾ ಉಪ ಪಂಗಡಗಳನ್ನು ಒಂದಾಗಿ ಸೇರಿಸಿ ಒಕ್ಕಲಿಗ ಜಾತಿ ಎಂದು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಜಾತಿ ಗಣತಿ ಪ್ರಕಟಿಸುವುದರಿಂದ ಮೀಸಲಾತಿ ಕೈತಪ್ಪಲಿದೆ. ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ ಸಮುದಾಯವು ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಸರ್ಕಾರ ಆಧಾರ್ ಕಾರ್ಡ್ ಆಧರಿಸಿ ಜಾತಿಗಣತಿ ನಡೆಸುವಂತೆ ಆಗ್ರಹಿಸಿದರು.

ಜಾತಿ ಗಣತಿ ವರದಿಯ ವಿರೋಧದ ನಡುವೆಯೂ ಬಿಡುಗಡೆಗೊಳಿಸಲು ಮುಂದಾದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಸಂಘಟನೆ ಗೌರವಾಧ್ಯಕ್ಷ ಡಾ.ಬಿ.ಕೃಷ್ಣ, ತಾಲೂಕು ಅಧ್ಯಕ್ಷ ಬಿ.ಪಿ.ಶಿವಪ್ಪ, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಪದಾಧಿಕಾರಿಗಳಾದ ಜಿ.ಸಿ.ಮಹೇಶ್, ಚಂದ್ರಶೇಖರ್, ವಿ.ಟಿ.ರವಿಕುಮಾರ್, ಅಂಬರೀಶ್, ವರ್ತಕರ ಸಂಘದ ಅಧ್ಯಕ್ಷ ಸಿ.ಎಚ್.ರವಿ, ಸುನಿಲ್‌ ಕುಮಾರ್, ಸಿದ್ದರಾಮು, ಶಿವಣ್ಣ, ಶಿವಕುಮಾರ್, ಪ್ರಸನ್ನ, ಅಂಕಪ್ಪ, ಅರಸು ಬೊಮ್ಮೇಗೌಡ, ಕೃಷ್ಣಪ್ಪ ಭಾಗವಹಿಸಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ