ರೈತರಿಗೆ ಸಮರ್ಪಕ ವಿದ್ಯುತ್ ಗೆ ಆಗ್ರಹಿಸಿ ಧರಣಿ

KannadaprabhaNewsNetwork |  
Published : Mar 04, 2025, 12:36 AM IST
ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬ ಧೊರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಎ. ಮಂಜು ನೇತೃತ್ವದಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್, ಬಿಜೆಪಿ ಮತ್ತು ರೈತ ಸಂಘದ ಕಾರ್ಯಕರ್ತರು ವಿದ್ಯುತ್ ಇಲಾಖೆ ವಿರುದ್ಧ ಸೋಮವಾರ ಶಾಸಕ ಎ. ಮಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್, ಬಿಜೆಪಿ ಮತ್ತು ರೈತ ಸಂಘದ ಕಾರ್ಯಕರ್ತರು ವಿದ್ಯುತ್ ಇಲಾಖೆ ವಿರುದ್ಧ ಸೋಮವಾರ ಶಾಸಕ ಎ. ಮಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಅನಕೃ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿದರು. ಮುಖಂಡರಾದ ಗಾಂಧಿನಗರ ದಿವಾಕರ್, ಚೌಡೇಗೌಡ, ನರಸೇಗೌಡ, ಮಂಜುಶೆಟ್ಟಿಗೌಡ ಮಾತನಾಡಿ, ಇಲಾಖೆಯ ನಿರ್ಲಕ್ಷ್ಯ ಖಂಡಿಸಿದರು. ಬಳಿಕ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಬಂದು ಕೆಲಕಾಲ ಧರಣಿ ನಡೆಸಿದರು.

ಶಾಸಕ ಎ. ಮಂಜು ಮಾತನಾಡಿ, ಸಮರ್ಪಕವಾಗಿ ವಿದ್ಯುತ್ ಸರಬರಾಜಿಲ್ಲದ ಕಾರಣ ರೈತರು ನೀರು ಹರಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ. ತಾಲೂಕಿನ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರಂತರ 7 ಗಂಟೆ ವಿದ್ಯುತ್ ಸರಬರಾಜಾಗುತ್ತಿಲ್ಲ, ಈ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ. ಪಟ್ಟಣಕ್ಕೆ 30 ಮೆಗಾವ್ಯಾಟ್ ವಿದ್ಯುತ್ ಸರಬರಾಜಾಗಬೇಕಿದ್ದು 25 ಮೆಗಾವ್ಯಾಟ್ ಮಾತ್ರ ಸರಬರಾಜು ಮಾಡಿ 5 ಮೆಗಾವ್ಯಾಟ್ ವಿದ್ಯುತ್ ಅನ್ನು ಖಾಸಗಿ ಕಾರ್ಖಾನೆಗೆ ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ 66/11 ಎಂಯುಎಸ್ಎಸ್ ನೂತನ ಘಟಕಕ್ಕೆ ಶಿಷ್ಟಾಚಾರ ಪಾಲಿಸದೇ ಚಾಲನೆ ನೀಡಲಾಗಿದೆ, ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಅಳವಡಿಸಿರುವ ಕಾರಣ ವ್ಯವಸ್ಥಿತವಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ, ಕಣಿಯಾರು ಗ್ರಾಮದಲ್ಲಿ 150 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸಲು 8 ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಾಗದ ಸಮಸ್ಯೆಯಿಂದ ಕಾಮಗಾರಿ ಪ್ರಾರಂಭಿಸಿರಲಿಲ್ಲ. ಅಲ್ಲಾ ಪಟ್ಟಣ ಗ್ರಾಮದಲ್ಲಿ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಣನೂರು ಹೋಬಳಿ ಸಿದ್ದಾಪುರ ಗೇಟ್ ಬಳಿ ಹೊಸದಾಗಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ತೆರೆಯಲು ಅನುಮೋದನೆ ದೊರೆತಿದ್ದರೂ ಕ್ರಮ ಕೈಗೊಂಡಿಲ್ಲ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಸದನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಒಂದುವಾರದಲ್ಲಿ ಎಲ್ಲ ಸಮಸ್ಯೆಗಳ ಕುರಿತು ಕ್ರಮ ವಹಿಸದಿದ್ದರೆ ಬೃಹತ್ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರಲ್ಲದೆ ಸ್ಥಳದಲ್ಲಿ ಹಾಜರಿದ್ದ ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಮಾತನಾಡಿದರು. ನಂತರ ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ವಿ.ಎ.ನಂಜುಂಡಸ್ವಾಮಿ, ಎಂ.ಎಸ್. ಯೋಗೇಶ್, ಚಂದ್ರಶೇಖರ್, ಶ್ರೀನಿವಾಸಮೂರ್ತಿ, ರವಿಕುಮಾರ್, ರಘು, ಮಂಜುನಾಥ್, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ