ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬುದ್ಧ ವಿಹಾರದಿಂದ ಹೆಸ್ಕಾಂ ವಿಭಾಗೀಯ ಕಚೇರಿವರೆಗೆ ಇಂಧನ ಸಚಿವರ ಅಣಕು ಶವಯಾತ್ರೆ ಮೆರವಣಿಗೆ ಹಮ್ಮಿಕೊಂಡು ಪ್ರತಿಕೃತಿ ದಹನ ಮಾಡಿದ ಪಕ್ಷದ ಸದಸ್ಯರು, ವಿಜಯಪುರ ತಹಸೀಲ್ದಾರ್, ಮಹಾನಗರ ಪಾಲಿಕೆ ಆಯುಕ್ತ ಹಾಗೂ ಹೆಸ್ಕಾಂ ಅಧೀಕ್ಷಕ ಅಭಿಯಂತರರ ಮುಖಾಂತರ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಮಹಾನಗರ ಪಾಲಿಕೆ ಆಯುಕ್ತರು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದು ಸಂಬಂಧಿಸಿದ ಮಹಾನಗರ ಪಾಲಿಕೆಯು ಕೊಡುವ ಕಟ್ಟಡ ನಿರ್ಮಾಣ ಮುಕ್ತಾಯ ಪ್ರಮಾಣ ಪತ್ರ ಕೊಟ್ಟರೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ತಿಳಿಸಿ ಪತ್ರ ಬರೆದಿದ್ದಾರೆ. ಆದರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರದೆ ಇರುವ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಯಾರು ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ಕೊಡುತ್ತಾರೆ?. ಇಂತಹ ಆದೇಶದಿಂದಾಗಿ ಬಡವ, ನಿರ್ಗತಿಕ ನಿವೇಶನದಾರರಿಗೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಕುಡಿಯುವ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬಡತನ ರೇಖೆಗಿಂತ ಕಡಿಮೆ ಆದಾಯಯಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವವರಿಗೆ ನಾಗರಿಕ ಸೌಲಭ್ಯ ವಂಚಿತವಾಗಿ ಮಕ್ಕಳ ಶಿಕ್ಷಣ ಹಾಗೂ ಇತರ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ಈ ಹಿಂದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರದೇ ಇರುವ ಕಟ್ಟಡಗಳಿಗೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕೊಟ್ಟಿರುತ್ತಾರೆ ಹಾಗೂ ಚರಂಡಿ ರಸ್ತೆಗಳನ್ನು ನಿರ್ಮಿಸಿರುತ್ತಾರೆ. ವಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿರುತ್ತಾರೆ. ಈಗ ತಕ್ಷಣ ನಾಗರಿಕರ ಅವಶ್ಯವಾದ ಸೌಲಭ್ಯಗಳನ್ನು ನಿಲ್ಲಿಸುವುದು ಯಾವ ನ್ಯಾಯ?. ಕೂಡಲೇ ಸಾರ್ವಜನಿಕರಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಲು ಆದೇಶ ಮಾಡಬೇಕು. ಹೆಸ್ಕಾಂ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕು. ಈ ಗಂಭೀರ ವಿಷಯದಲ್ಲಿ ಸರ್ಕಾರದ ಗಮನಕ್ಕೆ ತಂದು ಸೂಕ್ತಪರಿಹಾರ ಒದಗಿಸಿಕೊಡಬೇಕು. ಬೇಗನೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆಯ ಕಚೇರಿಗಳ ಮುಂದೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಸೈಯದ್ ಯಾಸೀನ ಗುಲಬರ್ಗಾ, ಮಲ್ಲು ಆಸಂಗಿ, ಹರೀಶ ಕುಲಕರ್ಣಿ, ಸೌಮ್ಯ ನಾರಾಯಣಕರ, ಅರುಣ ಶೇಖ, ಶ್ರೀಶೈಲ ಗನತಿ, ವಿಜಯಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ತೊದಲಬಾಗಿ ರೈತ ಮುಖಂಡರು ಉಪಸ್ಥಿತರಿದ್ದರು.