ಗದಗ: ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ಸೂಕ್ತ ಬರ ಪರಿಹಾರ ಒದಗಿಸುವುದು, ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಹಾಗೂ ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ಯುವ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಜೆನ್ ಜಿ ವೋಟರ್ಸ್ ಆ್ಯಂಡ್ ಸಿಟಿಜನ್ಸ್ ಫೋರಂ ವತಿಯಿಂದ ಬೃಹತ್ ಪಾದಯಾತ್ರೆ ಹಾಗೂ ರಸ್ತೆತಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅನಿಲ ಮೆಣಸಿನಕಾಯಿ ಆಕ್ರೋಶ: ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅನಿಲ ಮೆಣಸಿನಕಾಯಿ, ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧದ ಹೋರಾಟವಲ್ಲ. ಗದಗ ಜನರ ಮೂಲಭೂತ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಜಿಲ್ಲಾದ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದರೂ ಆಡಳಿತ ವ್ಯವಸ್ಥೆ 6 ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟು ರೈತರಿಗೆ ಘೋರ ಅನ್ಯಾಯವೆಸಗಿದೆ. ಕುಡಿಯುವ ನೀರು ಮಾನವನ ಮೂಲಭೂತ ಹಕ್ಕು ಎಂದು ಭಾಷಣ ಬಿಗಿಯುವ ಪ್ರಭಾವಿ ನಾಯಕರ ತವರು ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ (30 ದಿನಕ್ಕೊಮ್ಮೆ) ನೀರು ಪೂರೈಸುವ ವಿಕೃತ ವ್ಯವಸ್ಥೆ ಇರುವುದು ನಾಚಿಕೆಗೇಡು. ಶಾಶ್ವತ ಕುಡಿಯುವ ನೀರಿನ ಬೃಹತ್ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದರು.
ಪದವಿ ಮುಗಿಸಿದ ಪ್ರತಿಭಾವಂತ ಯುವಕರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ಸಿಗುವಂತಾಗಬೇಕು. ಗ್ರಾಮೀಣ ಹಾಗೂ ನಗರ ಭಾಗಗಳಿಗೆ ಗುಣಮಟ್ಟದ ರಸ್ತೆ, ನಿತ್ಯ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಯುವ ಮುಖಂಡ ವಸಂತ ಪಡಗದ, ರವಿಕಾಂತ ಅಂಗಡಿ, ಅಯ್ಯಪ್ಪ ಅಂಗಡಿ, ಮೋಹನ ವರವಿ, ವಿನೋದ ಮೊರಬದ, ಶಂಕರಗೌಡ ಜಾಯನಗೌಡ್ರ, ರಾಘವೇಂದ್ರ ಯಳವತ್ತಿ, ರವಿ ವಗ್ಗನವರ, ಕಿಶನ್ ಮೇರವಾಡೆ, ಸ್ವಾತಿ ಅಕ್ಕಿ, ಬಸನಗೌಡ ಪೊಲೀಸಪಾಟೀಲ, ರಜತ್ ಸೇರಿದಂತೆ ಅನೇಕರು ಇದ್ದರು. ಪಿಎಂ, ಸಿಎಂಗೆ ರವಾನೆ
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳ ವಿಡಿಯೋಗಳನ್ನು ಪೊಲೀಸ್ ಅಧಿಕಾರಿಗಳು ಪ್ರತ್ಯೇಕವಾಗಿಯೇ ಶೂಟಿಂಗ್ ಮಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಜೀಪ್ ಮುಂದೆ ಘೋಷಣೆ ಕೂಗಿದ ಘಟನೆ ನಡೆಯಿತು.