ಶಿರಹಟ್ಟಿ: ಮುಗ್ಧ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಗಲಭೆ, ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಗುರುವಾರ ಹಣದ ವ್ಯವಹಾರಕ್ಕೆ ನಡೆದ ಘಟನೆಯಲ್ಲಿ ಕೆಲ ಮುಸ್ಲಿಂ ಮುಖಂಡರ ಕೈವಾಡವೂ ಇದೆ. ಕೂಡಲೇ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಪೇಟೆ ಮಾರುತಿ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆಯನ್ನು ಖಂಡಿಸಿದರು.ಈ ವೇಳೆ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಕೋಮು ಸೌಹಾರ್ದತೆ, ಸಹೋದರತೆ ಕುರಿತು ಭಾಷಣ ಬಿಗಿಯುವ ಮುಸ್ಲಿಂ ವ್ಯಕ್ತಿಯ ಪ್ರಚೋದನಾತ್ಮಕ ಹೇಳಿಕೆಯಿಂದಲೇ ಕೋಮುಗಲಭೆ ನಡೆದಿದೆ. ಇವರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಬಾರದು ಎಂದು ಆಗ್ರಹಿಸಿದರು.ಬಾಕಿ ಹಣದ ವ್ಯವಹಾರ ಕುರಿತು ಗುರುವಾರ ನಡೆದ ಘಟನೆಯಲ್ಲಿ ಜಗಳ ಬಿಡಿಸಲು ಹೋದ ಅಮಾಯಕ ನಾಲ್ಕು ಜನ ಹಿಂದೂ ಯುವಕರ ಮೇಲೆ ಕಬ್ಬಿಣದ ರಾಡ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವ ವಿಡಿಯೋಗಳಿವೆ. ಘಟನೆಯಲ್ಲಿ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಕ್ಷಣ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದು, ಠಾಣೆಯ ಹಿರಿಯ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಆರೋಪಿಗಳನ್ನು ಬಂಧಿಸದೆ ಹಾಗೆ ಕಳಿಸಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕ್ರಮದಿಂದ ಪೊಲೀಸರೇ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಹಿಂದೂಪರ ಸಂಘಟನೆ ಪ್ರಮುಖ ಸಂತೋಷ ಕುರಿ ಮಾತನಾಡಿ, ಪಟ್ಟಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಒಂದು ನ್ಯಾಯ ಎನ್ನುವ ಹಾಗೆ ಅಧಿಕಾರಿಗಳು ನಡೆದುಕೊಳ್ಳಬಾರದು. ಘಟನೆಯ ನೈಜತೆಯನ್ನು ಗಮನಿಸಬೇಕು. ತಪ್ಪಿತಸ್ಥರು ಯಾರೇ ಇರಲಿ, ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಎಸ್‌ಡಿಪಿಐ ಮುಸ್ಲಿಂ ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿರುವವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಘಟನೆಗೆ ಕಾರಣರಾದ ಮುಸ್ಲಿಂ ಕಿಡಿಗೇಡಿ ಯುವಕರನ್ನು ಬಂಧಿಸಿ ಗಡೀಪಾರು ಮಾಡಬೇಕು. ವಿಳಂಬ ನೀತಿ ಅನುಸರಿಸಿದಲ್ಲಿ ಜಿಲ್ಲೆಯ ವಿವಿಧ ಹಿಂದೂ ಸಂಘಟನೆಗಳ ಸಹಕಾರದಿಂದ ಸರದಿ ಸತ್ಯಾಗ್ರಹ, ರಸ್ತೆತಡೆ, ಅಹೋರಾತ್ರಿ ಉಪವಾಸ ಸತ್ಯಾಗ್ರಹ, ಆಮರಣ ಉಪವಾಸ ಸತ್ಯಾಗ್ರಹದಂಥ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದರು.
ನಂತರ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮುಖಂಡರಾದ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಪ್ರವೀಣಗೌಡ ಪಾಟೀಲ, ಈರಣ್ಣ ಅಂಗಡಿ, ಸೋಮನಗೌಡ ಮರಿಗೌಡ್ರ ಮಾತನಾಡಿದರು. ಯಲ್ಲಪ್ಪ ಇಂಗಳಗಿ, ರಾಜೀವರಡ್ಡಿ ಬಮ್ಮನಕಟ್ಟಿ, ರಾಮಣ್ಣ ಕಂಬಳಿ, ಅಶೋಕ ವರವಿ, ಶಶಿ ಪೂಜಾರ, ಮಲ್ಲು ಕಬಾಡಿ, ಬಸವರಾಜ ನಾಯಕರ ಸೇರಿದಂತೆ ನೂರಾರು ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.11 ಜನರ ಬಂಧನಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಕೋಮಿನ ೧೧ ಜನ ಯುವಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರು ತನಿಖೆಗೆ ಮುಂದುವರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.