ದಾಂಡೇಲಿ: ಪ್ರತಿವರ್ಷ ವಿಜಯದಶಮಿಯಂದು ನಡೆಯುವ ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸತ್ಪುರುಷ ಪುರಮಾರ ದಾಂಡೇಲಪ್ಪನ ಜಾತ್ರೆ ಗುರುವಾರ ಹಲವು ಧಾರ್ಮಿಕ ವಿಧಿ-ವಿಧಾನ, ಪೂಜೆಗಳೊಂದಿಗೆ ಸಂಭ್ರಮದಿಂದ ನಡೆಯಿತು.
ದಾಂಡೇಲಿ ತಾಲೂಕಿನ ಹಾಳಮಡ್ಡಿ ಹತ್ತಿರ ಇರುವ ದಾಂಡೇಲಪ್ಪ ದೇವಸ್ಥಾನ ನಗರದಿಂದ ಸುಮಾರು ೩ ಕಿಲೋ ಮೀಟರ್ ದೂರ ಇದ್ದು, ಜಾತ್ರೆಗೆ ಹೋಗುವವರು ಅಲ್ಲಿಯವರೆಗೆ ನಡೆದು ಹೋಗಬೇಕು. ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಳಿಗೆಗಳು ಭಕ್ತರನ್ನು ಆಕರ್ಷಿಸುತ್ತವೆ. ವಿವಿಧ ಬಗೆಬಗೆಯ ಖಾದ್ಯಗಳು, ಆಟದ ಸಾಮಗ್ರಿಗಳ, ಮನೆ ಬಳಕೆಯ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ.
ಗಣ್ಯರ ಭೇಟಿ: ಪುರಮಾರ ದಾಂಡೇಲಪ್ಪ ಜಾತ್ರೆಗೆ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನಪರಿಷತ್‌ನ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ವಿವಿಧ ಇಲಾಖೆಗಳ ಅಧಿಕಾರಿಗಳು, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು, ಪೌರಾಯುಕ್ತರು, ಹೆಸ್ಕಾಂ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ನಗರದ ಗಣ್ಯರು ಆಗಮಿಸಿ, ದಾಂಡೇಲಪ್ಪನ ದರ್ಶನ ಪಡೆದರು.ಪೊಲೀಸ್ ಬಂದೋಬಸ್ತ್: ಜಾತ್ರಾ ಮಹೋತ್ಸವದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಜಾತ್ರೆಯ ಯಶಸ್ವಿಗಾಗಿ ಜಾತ್ರೋತ್ಸವ ಸಮಿತಿಯವರು, ಮಿರಾಶಿ ಕುಟುಂಬದವರು ಹಾಗೂ ಆಲೂರು ಗ್ರಾಪಂನವರು ಕೂಡಿ ಶ್ರಮಿಸಿದರು.